ನಮೋ ಆಪ್ ನಂತರ, ಕಾಂಗ್ರೆಸ್ ಆಪ್ ಸಹ ಮಾಹಿತಿ ಸೋರಿಕೆ ಮಾಡುತ್ತಿರಬಹುದೇ?
ಕಾಂಗ್ರೆಸ್ ಆಪ್ ಕೂಡ ತನ್ನ ಬಳಕೆದಾರರ ಮಾಹಿತಿಯನ್ನು ಸಿಂಗಪೂರ್ ಸಂಸ್ಥೆಯೊಂದಕ್ಕೆ ಸೋರಿಕೆ ಮಾಡುತ್ತಿರಬಹುದು!
ಪ್ರಧಾನಿ ನರೇಂದ್ರ ಮೋದಿ ಅವರ ನಮೋ ಆಪ್ ತನ್ನ ಬಳಕೆದಾರರ ಮಾಹಿತಿಯನ್ನು ಅಮೇರಿಕಾ ಕಂಪನಿಗಳಿಗೆ ಸೋರಿಕೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದ ನಂತರ, ಫ್ರೆಂಚ್ ಟ್ವಿಟರ್ ಬಳಕೆದಾರರೊಬ್ಬರು ಕಾಂಗ್ರೆಸ್ ಆಪ್ ಕೂಡ ತನ್ನ ಬಳಕೆದಾರರ ಮಾಹಿತಿಯನ್ನು ಸಿಂಗಪೂರ್ ಸಂಸ್ಥೆಯೊಂದಕ್ಕೆ ಸೋರಿಕೆ ಮಾಡುತ್ತಿರಬಹುದು ಎಂದು ಸುಳಿವು ನೀಡಿದ್ದಾರೆ.
ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಎಲಿಯಟ್ ಆಲ್ಡರ್ಸನ್(@fs0c131y), Google PlayStore ನಲ್ಲಿ ಅಧಿಕೃತ ಕಾಂಗ್ರೆಸ್ ಅಪ್ಲಿಕೇಶನ್ನ ಮೂಲಕ ಪಕ್ಷದ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದಾಗ, ವೈಯಕ್ತಿಕ ಮಾಹಿತಿಯನ್ನು HTTP ರಿಕ್ವೆಸ್ಟ್ ಮೂಲಕ ಎನ್ಕೋಡ್ ಮಾಡಿ ಪಕ್ಷದ ಸದಸ್ಯತ್ವ ಪುಟಕ್ಕೆ ಆನ್ಲೈನ್ನಲ್ಲಿ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ. ನಂತರ ವೈಯಕ್ತಿಕ ಮಾಹಿತಿಯು ಯಾವುದೇ ಗೂಢಲಿಪೀಕರಣವನ್ನು(encryption) ಹೊಂದಿಲ್ಲ, ಇದು ಸರಳವಾಗಿ ಡಿಕೋಡಿಂಗ್ ಮಾಡುತ್ತದೆ ಎಂದು ಅನಾಮಧೇಯ ಹ್ಯಾಕರ್ ಹೇಳುತ್ತದೆ. ಈ ಆರೋಪದಲ್ಲಿ ಅತಿ ಮುಖ್ಯವಾದ ಅಂಶವೆಂದರೆ, ಕಾಂಗ್ರೆಸ್ ಸದಸ್ಯತ್ವ ಪುಟದ ಐಪಿ ವಿಳಾಸ ಸಿಂಗಪೂರ್'ನಲ್ಲಿರುವ ಸರ್ವರ್'ಗೆ ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಆಲ್ಡರ್ಸನ್ ಅವರ ಇತ್ತೀಚಿನ ಬಹಿರಂಗ ಹೇಳಿಕೆ ನಂತರ ಅನೇಕ ಟ್ವಿಟ್ಟರ್ ಬಳಕೆದಾರರು ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ. ಆದರೆ ಇನ್ನಿತರ ದೇಶಗಳಲ್ಲಿನ ಸರ್ವರ್'ಗಳು ಮಾಹಿತಿ ಸೋರಿಕೆ ಮಾಡುತ್ತಿವೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಗಳನ್ನೂ ಹೊಂದಿಲ್ಲ ಎಂದು ಹಲವರು ಹೇಳಿದ್ದಾರೆ.
ಆದರೆ, ಅಮೆರಿಕಾದ ಕಂಪೆನಿಗಳಿಗೆ ನಮೋ ಆಪ್ ಬಳಕೆದಾರರ ಮಾಹಿತಿ ಸೋರಿಕೆ ಮಾಡುತ್ತಿದೆ ಎಂಬ ತನಿಖೆಯನ್ನು ಬಹಿರಂಗವಾಗಿ ಹೇಳಿದ್ದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಆಲ್ಡರ್ಸನ್ ಸ್ಪಷ್ಟಪಡಿಸಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಪ್ಲಿಕೇಶನ್ ಬಗ್ಗೆಯೂ ತಾವು ಪರಿಶೀಲಿಸಿರುವುದಾಗಿ ಅವರು ಹೇಳಿದ್ದಾರೆ.