ನವದೆಹಲಿ: ಇತ್ತೀಚೆಗಷ್ಟೇ ಎನ್​ಡಿಎ ಮೈತ್ರಿಕೂಟ ತೊರೆದು ಬಿಜೆಪಿಗೆ ಶಾಕ್ ನೀಡಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಆರ್​ಎಲ್​ಎಸ್​ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಇಂದು ಬಿಹಾರದ ಮಹಾಘಟ್​ಬಂಧನ್​​ಗೆ ತಮ್ಮ ಬೆಂಬಲ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್​​ನ ಹಿರಿಯ ನಾಯಕ ಅಹಮ್ಮದ್​​ ಪಟೇಲ್​ ಸಮ್ಮುಖದಲ್ಲಿಯೇ ಉಪೇಂದ್ರ ಕುಶ್ವಾಹ ಮಹಾಘಟಬಂಧನ್​​ ಜತೆ ಕೈಜೋಡಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಕಾಂಗ್ರೆಸ್​, ಆರ್​ಜೆಡಿ, ಹಿಂದುತ್ವ ಆವಾಮ್​ ಮೋರ್ಚಾ ಜತೆ ಚುನಾವಣೆ ಎದುರಿಸಲು ಸಮ್ಮತಿ ಸೂಚಿಸಿದ್ದು, ಮಹಾಘಟಬಂಧನಕ್ಕೆ ಬೆಂಬಲಿಸಿದ್ದಾರೆ. ದೆಹಲಿಯಲ್ಲಿ ನಡೆದ ಉಪೇಂದ್ರ ಕುಶ್ವಾಹ ಸೇರ್ಪಡೆ ಕಾರ್ಯಕ್ರಮದಲ್ಲಿ ಆರ್​ಜೆಡಿಯ ಮುಖ್ಯಸ್ಥ ತೇಜಸ್ವಿ ಯಾದವ್​​, ಎನ್​​ಸಿಪಿಯ ಶರದ್​ ಪವಾರ್, ಜಿತಾನ್ ರಾಮ್ ಮಂಜಿ, ಶಕ್ತಿ ಸಿಂಗ್ ಗೋಹಿಲ್ ಮತ್ತಿತರರು​ ಭಾಗಿಯಾಗಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ ಕುಶ್ವಾಹ, ಎನ್​ಡಿಎ ತೊರೆದ ಬಳಿಕ ತಮಗೆ ಬಹಳಷ್ಟು ಆಯ್ಕೆ ಇದ್ದವು. ಆದರೆ ರಾಹುಲ್ ಗಾಂಧಿಯವರ ಉದಾರತೆ ಕಾರಣ ತಾವು ಯುಪಿಎಗೆ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದರು.


ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆಗಿನ ವೈಮನಸ್ಯ ಹಾಗೂ ಲೋಕಸಭೆ ಚುನಾವಣೆ ಸೀಟು ಹಂಚಿಕೆಯಲ್ಲಿನ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕುಶ್ವಾಹ ಎನ್​ಡಿಎದಿಂದ ಹೊರಬಂದಿದ್ದರು.