ನವದೆಹಲಿ: ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮತ್ತು ಬಿಎಸ್ಪಿಯ ಮಾಯಾವತಿ ಇದೇ ಮೊದಲ ಬಾರಿಗೆ ತಮ್ಮ ಎರಡು ದಶಕಗಳ ವೈರತ್ವ ಬದಿಗಿಟ್ಟು ಮೇನ್ಪುರಿಯಲ್ಲಿ ಜಂಟಿ ಸಭೆ ನಡೆಸಲಿದ್ದಾರೆ.ಆ ಮೂಲಕ ಉಭಯ ನಾಯಕರು ಬಿಜೆಪಿ ಪ್ರಾಬಲ್ಯಕ್ಕೆ ಸವಾಲೊಡ್ಡಲು ಮುಂದಾಗಿದ್ದಾರೆ.ಮೇನ್ಪುರಿ ಕ್ಷೇತ್ರದಲ್ಲಿ ಮುಲಾಯಂ ಸಿಂಗ್ ಯಾದವ್ ಸ್ಪರ್ಧಿಸುತ್ತಿದ್ದು, ಈಗ ಜಂಟಿ ಸಭೆಯಲ್ಲಿ ಐಕ್ಯತೆ ಪ್ರದರ್ಶಿಸುವುದರ ಮೂಲಕ ಎರಡು ಪಕ್ಷಗಳು ಮೈತ್ರಿಕೂಟದ ಶಕ್ತಿ ಪ್ರದರ್ಶನವನ್ನು ನಡೆಸಲಿವೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

1995ರಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ರಾಜ್ಯ ಅತಿಥಿ ಗೃಹದ ಮೇಲೆ ದಾಳಿ ನಡೆಸಿದ ಬಳಿಕ ಮಾಯಾವತಿ ಬೆಂಬಲವನ್ನು ಹಿಂತೆಗೆದುಕೊಂಡು ಬಿಜೆಪಿ ಜೊತೆ ಕೈಜೋಡಿಸಿದ್ದರು.ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈಗ ಉಭಯ ಪಕ್ಷಗಳಿಗೆ ಮೈತ್ರಿಯ ಅಗತ್ಯವಿದ್ದು, ಇಲ್ಲದೆ ಹೋದಲ್ಲಿ ಬಿಜೆಪಿ ಸುಲಭವಾಗಿ ಚುನಾವಣೆಯಲ್ಲಿ ಗೆಲ್ಲಲಿದೆ ಎನ್ನುವ ಲೆಕ್ಕಾಚಾರ ಅರಿವಾಗಿದೆ.ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯನ್ನು ಮಾಡಿಕೊಂಡಿವೆ.


ಅಷ್ಟಕ್ಕೂ ಈ ಎರಡು ದಶಕಗಳ ಕಹಿ ಘಟನೆಗಳನ್ನು ಮರೆಯುವುದು ಸುಲಭವಲ್ಲ. ಈ ಹಿಂದೆ ಮುಲಾಯಂ ಸಿಂಗ್ ಅವರು ದೆಯೋಬಂದ್, ಬಡಾನ್ ಮತ್ತು ಆಗ್ರಾದಲ್ಲಿ ನಡೆದ ಮೂರು ಜಂಟಿ ರ್ಯಾಲಿಯಲ್ಲಿ ಆರೋಗ್ಯದ ಕಾರಣ ನೀಡಿ ಹಿಂದೆ ಸರಿದಿದ್ದರು.ಈ ಬಾರಿ ಮುಲಾಯಂ ಸಿಂಗ್ ಜೊತೆ, ಅಖಿಲೇಶ್ ಯಾದವ್ ಮತ್ತು ಮಾಯಾವತಿ ಮತ್ತು  ರಾಷ್ತ್ರೀಯ ಲೋಕ ದಳದ ಮುಖ್ಯಸ್ಥ ಅಜಿತ್ ಸಿಂಗ್ ಅವರೊಂದಿಗೆ ಸಭೆ ನಡೆಸಲಿದ್ದಾರೆ.ಈ ರ್ಯಾಲಿಗೆ ಬಂದಂತಹವರಿಗೆ ಆಹಾರ ಪ್ಯಾಕೆಟ್ಗಳನ್ನು ಒದಗಿಸಲಾಗುವುದು ಎಂದು ಸಮಾಜವಾದಿ ಪಕ್ಷದ ಶಾಸಕ ರಾಜ್ ಕುಮಾರ್ ಹೇಳಿದ್ದಾರೆ.