ವಿವಿಐಪಿ ಕ್ಯಾಪ್ಟರ್ ಹಗರಣ: ಕ್ರಿಶ್ಚಿಯನ್ ಮೈಕೆಲ್ ಸಿಬಿಐ ಬಂಧನ ವಿಸ್ತರಿಸಿದ ದೆಹಲಿ ಹೈಕೋರ್ಟ್
ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಅವರ ಸಿಬಿಐ ಬಂಧನವನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಿ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ನವದೆಹಲಿ: ಬಹುಕೋಟಿ ವಿವಿಐಪಿ ಕ್ಯಾಪ್ಟರ್ ಹಗರಣದ ಪ್ರಮುಖ ಆರೋಪಿ, ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಅವರ ಸಿಬಿಐ ಬಂಧನವನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಿ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ದುಬೈ ನಿಂದ ಗಡಿಪಾರಾಗಿ ಭಾರತಕ್ಕೆ ಬಂದಿರುವ ಕ್ರಿಶ್ಚಿಯನ್ ಮೈಕೆಲ್(57) ಅವರನ್ನು ಕಳೆದ ವಾರ ವಿಚಾರಣೆಗಾಗಿ ದೆಹಲಿ ಪಟಿಯಾಲ ಕೋರ್ಟ್ ಐದು ದಿನ ಸಿಬಿಐ ವಶಕ್ಕೆ ನೀಡಿತ್ತು. ಇಂದು ಮತ್ತೆ ಸಿಬಿಐ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರ ಮುಂದೆ ಹಾಜರುಪಡಿಸಿದ ಸಿಬಿಐ ಹೆಚ್ಚಿನ ವಿಚಾರಣೆಗಾಗಿ ಮತ್ತೆ ನಾಲ್ಕು ದಿನ ತನ್ನ ವಶಕ್ಕೆ ಪಡೆದಿದ್ದು, ಇದರಿಂದ ಡಿಸೆಂಬರ್ 19ರವರೆಗೆ ಸಿಬಿಐ ಬಂಧನ ವಿಸ್ತರಣೆಯಾದಂತಾಗಿದೆ.
ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ವಕೀಲ ರೋಸ್ಮೇರಿ ಪ್ಯಾಟ್ರಿಜಿ, ” ಮಿಶೆಲ್ ಬಗ್ಗೆ ನನಗೆ ಸಾಕಷ್ಟು ತಿಳಿದಿರುವ ಕಾರಣಕ್ಕೆ ಸಿಬಿಐ ನನ್ನನ್ನು ಬಂಧಿಸುವ ಆತಂಕವಿದೆ. ಅಂಥ ಯಾವುದೇ ಪ್ರಸಂಗ ನಡೆಯದೇ ಇರುವು ವಿಶ್ವಾಸ ನನ್ನದು. ನಾನು ಮಿಶೆಲ್ಗೆ ನೆರವಾಗಲಷ್ಟೇ ಬಂದಿದ್ದೇನೆ. ಕ್ರಿಸ್ಮಸ್ ಹೊತ್ತಿಗೆ ನಾನು ನನ್ನ ತಾಯ್ನಾಡಿಗೆ ಹೊರಡುವ ವಿಶ್ವಾಸವಿಟ್ಟುಕೊಂಡಿದ್ದೇನೆ,” ಎಂದು ಹೇಳಿದ್ದಾರೆ.
12 ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್ಪಿ ತ್ಯಾಗಿ ಸೇರಿದಂತೆ 9 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಈ ಒಪ್ಪಂದದಿಂದ ಸರ್ಕಾರದ ಖಜಾನೆಗೆ 2,666 ಕೋಟಿ ರೂ ನಷ್ಟವಾಗಿದೆ ಎಂದು ಆರೋಪಿಸಿದೆ.