ಸುಪುಲ್: ಬಿಹಾರದ  ಸುಪುಲ್ ನಲ್ಲಿ ಇಂದು ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸುತ್ತಾ, ಸರ್ಕಾರದ ತಪ್ಪು ನೀತಿಗಳ ಕಾರಣದಿಂದಾಗಿ 45 ವರ್ಷಗಳಲ್ಲೇ ಇಂದು ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ಕೇಂದ್ರ ಸರ್ಕಾರ ಬಡವರ ಹಣವನ್ನು ಶ್ರೀಮಂತರ ಜೇಬಿಗೆ ಸೇರಿಸುತ್ತಿದ್ದೆ ಎಂದು ಆರೋಪಿಸಿದರು.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಅಭ್ಯರ್ಥಿ ರಂಜಿತ್ ರಂಜನ್ ಅವರ ಪರವಾಗಿ ಚುನಾವಣಾ ರ‍್ಯಾಲಿ ನಡೆಸಿದ ರಾಹುಲ್ ಗಾಂಧಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದು ಬಡವರ ಸ್ಥಿತಿ ಚಿಂತಾಜನಕವಾಗಿದೆ. ಬಡವರ ಬಳಿ ಹಣವಿಲ್ಲದೆ, ಅವರ ಕೊಳ್ಳುವ ಶಕ್ತಿ ಕೊನೆಗೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.


ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನ್ಯಾಯ್ ಯೋಜನೆ ಜಾರಿ ಬಗ್ಗೆ ಪುನರುಚ್ಚರಿಸಿದ ರಾಹುಲ್, ಈ ಯೋಜನೆ ಅಡಿಯಲ್ಲಿ 12,000 ಕ್ಕಿಂತ ಕಡಿಮೆ ಆದಾಯ ಗಳಿಸುವವರಿಗೆ ಪ್ರತಿವರ್ಷ 72,000 ರೂ. ನೀಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಈ ಯೋಜನೆ ದೇಶದಲ್ಲಿ ಉದ್ಯೋಗವನ್ನು ಹೆಚ್ಚಿಸುವುದರ ಜೊತೆಗೆ ದೇಶದ ಆರ್ಥಿಕತೆಯನ್ನು ಸುಧಾರಿಸುತ್ತದೆ ಎಂದು ಅವರು ಹೇಳಿದರು.


ಕಾಂಗ್ರೆಸ್ ಸರ್ಕಾರ ರಚನೆಯಾದರೆ ಎರಡು ಬಜೆಟ್:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮುಂದಿನ ವರ್ಷ ದೇಶದಲ್ಲಿ ಎರಡು ಬಜೆಟ್ಗಳನ್ನು ಪರಿಚಯಿಸಲಾಗುವುದು. ಒಂದು ಸಾಮಾನ್ಯ ಬಜೆಟ್ ಮತ್ತು ರೈತರಿಗೆ ಪ್ರತ್ಯೇಕ ಬಜೆಟ್ ಇರುತ್ತದೆ ಎಂದ ರಾಹುಲ್ ಗಾಂಧಿ, ಇಂದು ರೈತ 20 ಸಾವಿರ ರೂಪಾಯಿ ಸಾಲವನ್ನು ಪಡೆದು ಅದನ್ನು ತೀರಿಸಲು ಸಾಧ್ಯವಾಗುತ್ತಿಲ್ಲ.  ಸರ್ಕಾರ ಅವರನ್ನು ಜೈಲಿಗೆ ಹಾಕುತ್ತದೆ. ಆದರೆ ಚುನಾವಣೆ ನಂತರ ಸಾಲವನ್ನು ಪಾವತಿಸದಿದ್ದರೆ ರೈತ ಜೈಲಿಗೆ ಹೋಗಬೇಕಿಲ್ಲ ಎಂದರು."


ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಇಂದು ಏರಿಕೆಯಾಗಿದೆ. 45 ವರ್ಷಗಳಲ್ಲೇ ದೇಶದಲ್ಲಿ ಹೆಚ್ಚಿನ ನಿರುದ್ಯೋಗ ಸಮಸ್ಯೆ ಎದುರಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ರಾಹುಲ್, ಸಾರ್ವಜನಿಕರ ಹಣವು ಬಂಡವಾಳಗಾರರ ಖಾತೆಗೆ ಹೋಗುತ್ತಿದೆಯೆಂದು ಆರೋಪಿಸಿದರು. ಮುಂದುವರೆದು ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ರಚನೆಯಾದರೆ ಆ ಹಣ ಸಾರ್ವಜನಿಕರ ಖಾತೆಗೆ ಬರುತ್ತದೆ ಎಂದು ಭರವಸೆ ನೀಡಿದರು.


ಶ್ರೀಮಂತರ ಖಾತೆಗೆ ಹಣ ಹಾಕಬಹುದಾದರೆ, ಬಡವರ ಖಾತೆಗೆ ಹಣ ಹಾಕಲು ಏಕೆ ಸಾಧ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ರಾಹುಲ್ ಪ್ರಶ್ನಿಸಿದ್ದಾರೆ.