ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಮಾಜವಾದಿ ಪಕ್ಷದ(ಎಸ್​ಪಿ) ಅಭ್ಯರ್ಥಿಯನ್ನು ಸೋಲಿಸಲು ಸ್ವತಃ ಅಧಿಕಾರಿಗಳಿಗೆ ನಿರ್ದೇಶಿಸುತ್ತಿದ್ದಾರೆ ಎಂದು ಆರೋಪಿಸಿ ಸಮಾಜವಾದಿ ಪಕ್ಷದ (ಎಸ್​ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಮೇ 16 ರಂದು ಅಖಿಲೇಶ್ ಯಾದವ್ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಪತ್ರವನ್ನು ಕಳುಹಿಸಿದ್ದಾರೆ ಎಂದು ಎಸ್​ಪಿ ಮುಖ್ಯ ವಕ್ತಾರ ರಾಜೇಂದ್ರ ಚೌಧರಿ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING


ಭಾನುವಾರ ಗೋರಖ್ಪುರದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಉದ್ದೇಶಕ್ಕಾಗಿ ಪೊಲೀಸ್ ಮತ್ತು ಜಿಲ್ಲಾಡಳಿತ ಸಮಾಜವಾದಿ ಪಕ್ಷದ ನಾಯಕರು ಮತ್ತು ಬೆಂಬಲಿಗರಿಗೆ ಕಿರುಕುಳ ನೀಡುತ್ತಿದೆ ಎಂದೂ ಕೂಡ ಅಖಿಲೇಶ್ ಪತ್ರದಲ್ಲಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಮೇ 16 ರಂದು  ಬೆಳಿಗ್ಗೆ 6.30 ಕ್ಕೆ ಗೋರಖ್ಪುರದ ಕ್ಯಾಂಟ್ನ ಉಸ್ತುವಾರಿ ಇನ್ಸ್ಪೆಕ್ಟರ್ ಸಮಾಜವಾದಿ ಪಕ್ಷದ ಸಂಜಯ್ ಯಾದವ್ ರನ್ನು ನಾನ್-ಕೋಚಿಂಗ್ ಪೊಲೀಸ್ ಠಾಣೆಗೆ ಕರೆದೊಯ್ದು ಬಿಜೆಪಿ ಗೆಲ್ಲಲು ಸಹಕರಿಸುವಂತೆ ಒತ್ತಡ ಹಾಕಿದ್ದಾರೆ ಎಂದೂ ಕೂಡ ಪತ್ರದಲ್ಲಿ ದೂರಿದ್ದಾರೆ.


ಗೋರಖ್ಪುರ್ ಮತ್ತು ವಾರಣಾಸಿ ಲೋಕಸಭಾ ಕ್ಷೇತ್ರಗಳಲ್ಲಿ ಗ್ರಾಮದ ಮುಖ್ಯಸ್ಥರು, ವಲಯದ ಪಂಚಾಯತ್ ಸದಸ್ಯರು ಮತ್ತು ಬೀದಿ ವ್ಯಾಪಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಇದರಲ್ಲಿ ರಾಜ್ಯದ ಮಂತ್ರಿಗಳ ಕೈವಾಡವೂ ಇದೇ ಎಂದು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಆರೋಪಿಸಲಾಗಿದ್ದು, ಈ ಕುರಿತಂತೆ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಖಿಲೇಶ್ ಮನವಿ ಮಾಡಿದ್ದಾರೆ. 


ಗೋರಖ್ಪುರದಲ್ಲಿ ಮುಖ್ಯಮಂತ್ರಿ ಮತ್ತು ಅವರ ಮಂತ್ರಿಗಳ ಹಾಗೂ ಜಿಲ್ಲಾ ಪೊಲೀಸ್ ಆಡಳಿತದ ಚಟುವಟಿಕೆಗಳನ್ನು ಚುನಾವಣಾ ಆಯೋಗ ನಿಲ್ಲಿಸದಿದ್ದರೆ, ಮೇ 19 ರಂದು ನ್ಯಾಯಸಮ್ಮತವಾದ ಚುನಾವಣೆಗಳು ಸಾಧ್ಯವಾಗುವುದಿಲ್ಲ ಎಂದು ಅಖಿಲೇಶ್ ಹೇಳಿದರು.