ಚೆನ್ನೈ: ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಸಾವನ್ನಪ್ಪಿ ಒಂದು ವಾರವೂ ಕಳೆದಿಲ್ಲ. ಆಗಲೇ ಡಿಎಂಕೆ ಉತ್ತರಾಧಿಕಾರಿ ಸಂಘರ್ಷ ಆರಂಭವಾಗಿದೆ. ಕರುಣಾನಿಧಿ ಹಿರಿಯ ಪುತ್ರ ಎಂ.ಕೆ. ಅಳಗಿರಿ ತನ್ನ ಸಹೋದರ ಎಂ.ಕೆ. ಸ್ಟಾಲಿನ್ ಗೆ ಸವಾಲೆಸೆದಿದ್ದಾರೆ. ತಮಗೆ ಡಿಎಂಕೆಯ ಎಲ್ಲರ ಬೆಂಬಲವಿದೆ ಎಂದು ಘೋಷಿಸಿರುವ ಅವರು ಪಕ್ಷದ ನೈಜ ಸದಸ್ಯರು ತಮ್ಮ ಬೆಂಬಲಕ್ಕಿದ್ದಾರೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಚೆನ್ನೈನ ಮರಿನಾ ಬೀಚ್​ನಲ್ಲಿರುವ ಕರುಣಾನಿಧಿ ಅವರ ಸಮಾಧಿಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, "ನನ್ನ ತಂದೆಯ ನೈಜ ಸಂಬಂಧಿಗಳು(ಪಕ್ಷದ ನೈಜ ಸದಸ್ಯರು)  ನನ್ನ ಕಡೆ ಇದ್ದಾರೆ. ತಮಿಳುನಾಡಿನಲ್ಲಿರುವ ನಮ್ಮ ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರು ನನ್ನ ಬೆಂಬಲಕ್ಕಿದ್ದಾರೆ. ಇದು ನನಗೆ ಉತ್ತೇಜನ ನೀಡಿದೆ. ಕಾಲವೇ ಎಲ್ಲದ್ದಕ್ಕೂ ಉತ್ತರ ನೀಡಲಿದೆ. ಈ ಹಿಂದೆ ನಡೆದ ಕಹಿ ಘಟನೆಗಳ ಬಗ್ಗೆ ನನಗೆ ಬೇಸರವಿದೆ. ಅಷ್ಟನ್ನು ಮಾತ್ರ ನಾನು ಹೇಳಬಯಸುತ್ತೇನೆ” ಎಂದು ಹೇಳಿದ್ದಾರೆ.



ಡಿಎಂಕೆಯ ಸಾಮಾನ್ಯ ಸಭೆ ಮುಂದಿನ ತಿಂಗಳು ನಡೆಯುವ ಸಾಧ್ಯತೆಯಿದ್ದು, ಹಾಲಿ ಕಾರ್ಯಾಧ್ಯಕ್ಷರಾಗಿರುವ ಎಂ.ಕೆ. ಸ್ಟಾಲಿನ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಆದರೆ, ಅದಕ್ಕೆ ಮುನ್ನವೇ ಡಿಎಂಕೆಯಲ್ಲಿ ಒಡಕು ಮೂಡುವ ಲಕ್ಷಣಗಳು ಕಾಣಿಸಿವೆ. ಹಲವು ವರ್ಷಗಳ ಹಿಂದೆಯೇ ಆರಂಭವಾಗಿದ್ದ ಅಳಗಿರಿ ಮತ್ತು ಸ್ಟಾಲಿನ್ ನಡುವಣ ಕದನ ಈಗ ಮತ್ತೆ ಪ್ರಾರಂಭವಾಗಿದೆ. 


ಒಂದು ಕಾಲದಲ್ಲಿ ಪಕ್ಷದ ಪ್ರಬಲ ನಾಯಕರಾಗಿದ್ದ ಕರುಣಾನಿಧಿ ಪುತ್ರ ಅಳಗಿರಿ, ಪಕ್ಷದ ಉಸ್ತುವಾರಿ ಹೊತ್ತು ಮಧುರೈ ಪ್ರಾಂತ್ಯದಲ್ಲಿ ಪಕ್ಷವನ್ನು ಸಂಘಟಿಸಿ, ಕಾರ್ಯಕರ್ತರನ್ನು ನಿಯಂತ್ರಿಸುತ್ತಿದ್ದರು. 2009ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದ ಅವರು ಯುಪಿಎ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ನಂತರ ಪಕ್ಷದಲ್ಲಿ ನಿರ್ಲಕ್ಷಿಸಲ್ಪಟ್ಟ ಅವರು ತಂದೆ ಹಾಗೂ ಡಿಎಂಕೆ ಯಿಂದ ದೂರವಾಗಿದ್ದರು. 


ಪಕ್ಷದ ಹಿರಿಯ ನಾಯಕರ ವಿರುದ್ಧ ಹೇಳಿಕೆ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಆರೋಪದಲ್ಲಿ ಅಳಗಿರಿ ಅವರನ್ನು ಕರುಣಾನಿಧಿ 2014ರಲ್ಲಿ ಪಕ್ಷದಿಂದ ಉಚ್ಚಾಟಿಸಿದ್ದರು. ಈ ಸಂದರ್ಭದಲ್ಲಿ ಪಕ್ಷ ಹಾಗೂ ಸ್ಟಾಲಿನ್ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಕರುಣಾನಿಧಿ, ಅಳಗಿರಿ ಅವರಿಗೆ ತಾಕೀತು ಮಾಡಿದ್ದರು. ಅಂದಿನಿಂದ ಯಾವುದೇ ಹೇಳಿಕೆ ನೀಡದೆ ಮೌನವಹಿಸಿದ್ದ ಅಳಗಿರಿ, ಈಗ ಮತ್ತೆ ಬಹಿರಂಗವಾಗಿ ಸಹೋದರನಿಗೆ ಸವಾಲೆಸೆದಿದ್ದಾರೆ.