ರಾಮಜನ್ಮ ಸ್ಥಳದಲ್ಲಿ ಇಂದು ಮೋದಿ, ಅಖಿಲೇಶ್, ಮಾಯಾವತಿ ರ್ಯಾಲಿ; ಎಲ್ಲರ ಚಿತ್ತ ಅಯೋಧ್ಯೆಯತ್ತ!
ಕಳೆದ ಐದು ವರ್ಷಗಳಲ್ಲಿ ಅಯೋಧ್ಯೆಗೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದು, ಅಖಿಲೇಶ್ ಹಾಗೂ ಮಾಯಾವತಿ ಅವರ ಭೇಟಿಯೂ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ನವದೆಹಲಿ: ಲೋಕಸಭಾ ಚುನಾವಣೆ ಐದನೇ ಹಂತದ ಮತದಾನಕ್ಕೆ ಕೆಲವೇ ದಿನಗಳಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಹಾಗೂ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಬುಧವಾರ ಅಯೋಧ್ಯೆಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂರೂ ಘಟಾನುಘಟಿಗಳು ಒಂದೇ ದಿನ, ಒಂದೇ ಸ್ಥಳದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ಅಯೋಧ್ಯೆ ಮುಖ್ಯ ನಗರದಿಂದ 27 ಕಿ.ಮೀ. ದೂರದಲ್ಲಿರುವ ಗೋಸಾಯ್ಗಂಜ್ ನಲ್ಲಿರುವ ಮಾಯಾಬಜಾರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಪ್ರದೇಶ ಅಯೋಧ್ಯೆ ಜಿಲ್ಲೆಗೆ ಸೇರಿದ್ದಾದರೂ ಅಂಬೇಡ್ಕರ್ ನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು, ಮೇ 12ರಂದು ನಡೆಯಲಿರುವ 6 ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ನಡೆಯಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಈ ರ್ಯಾಲಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇದುವರೆಗೂ ಪ್ರಧಾನಿ ಮೋದಿ ಅವರು ಅಭಿವೃದ್ಧಿಯ ಬಗ್ಗೆ, ಭಯೋತ್ಪಾದನೆ ಮತ್ತು ಕಾಂಗ್ರೆಸ್ ಪಕ್ಷದ ಅಸಮರ್ಥತೆಗಳ ಕುರಿತು ಎಲ್ಲಾ ಚುನಾವಣಾ ರ್ಯಾಲಿಗಳಲ್ಲಿ ಮಾತನಾಡಿದ್ದಾರೆ. ಆದರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರವನ್ನು ಪ್ರಸ್ತಾಪಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.
ಅಲ್ಲದೆ, ಕಳೆದ ಐದು ವರ್ಷಗಳಲ್ಲಿ ಅಯೋಧ್ಯೆಗೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದು, ಅಖಿಲೇಶ್ ಹಾಗೂ ಮಾಯಾವತಿ ಅವರ ಭೇಟಿಯೂ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಈ ಹಿಂದೆ ಬದ್ಧ ವೈರಿಗಳಾಗಿದ್ದ ಸಮಾಜವಾದಿ ಪಕ್ಷ ಮತ್ತು ಬಹುಜನಸಮಾಜ ಪಕ್ಷ ಈ ಬರಿಯ ಲೋಕಸಭಾ ಚುನಾವಣೆಗೆ ಮೈತ್ರಿಯಾಗಿ ಸ್ಪರ್ಧಿಸುತ್ತಿದ್ದು, ರಾಜ್ಯದಲ್ಲಿ ಶತಾಯಗತಾಯ ಬಿಜೆಪಿ ಸೋಲಿಸಲು ನಿರ್ಧರಿಸಿವೆ. ಹೀಗಾಗಿ ಫೈಜಾಬಾದ್ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ರಾಮ್ಸನೇಹಿ ಘಾಟ್ ನಲ್ಲಿ ಬುಧವಾರ ಮಧ್ಯಾಹ್ನ ಮೈತ್ರಿ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳಲಿವೆ. ಈ ಕ್ಷೇತ್ರಕ್ಕೆ ಮೇ 6ರಂದು ನಡೆಯಲಿರುವ ಐದನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ನಡೆಯಲಿದೆ.