ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶವು ಸಮ್ಮಿಶ್ರ ಸರ್ಕಾರದ ಸೂಚನೆ ನೀಡುತ್ತಿದೆ. ಇದುವರೆಗೆ ರಾಜ್ಯದ 90 ಸ್ಥಾನಗಳಲ್ಲಿ ಬಿಜೆಪಿ 36 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 33 ಸ್ಥಾನಗಳಲ್ಲಿ ಮತ್ತು ಇತರ ಪಕ್ಷಗಳು ಹಾಗೂ ಸ್ವತಂತ್ರರು 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಹರಿಯಾಣ ವಿಧಾನಸಭಾ ಚುನಾವಣಾ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಿಎಂ ಭೂಪೇಂದ್ರ ಸಿಂಗ್ ಹೂಡಾ, ಜನರ ನಿರ್ಧಾರ ಖಟ್ಟರ್ ಸರ್ಕಾರದ ವಿರೋಧಿ ಅಲೆಯನ್ನು ಬಿಂಬಿಸುತ್ತಿದೆ ಎಂದು ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಭೂಪೇಂದ್ರ ಸಿಂಗ್ ಹೂಡಾ, 'ಹರಿಯಾಣ ಜನರು ನೀಡಿರುವ ಆದೇಶ ಬಿಜೆಪಿ ಸರ್ಕಾರದ ವಿರುದ್ಧವಾಗಿದೆ. ಹರಿಯಾಣದ ಜನರಿಗೆ ಧನ್ಯವಾದಗಳು. ಬಿಜೆಪಿಯ 75 ಘೋಷಣೆಗಳು ಹಳ್ಳ ಹಿಡಿದಿವೆ. ಜೆಜೆಪಿ, ಸ್ವತಂತ್ರರು, ಐಎನ್‌ಎಲ್‌ಡಿ, ಇಂತಹ ಪಕ್ಷಗಳು ಖಟ್ಟರ್ ಸರ್ಕಾರದ ವಿರುದ್ಧ ಸಾರ್ವಜನಿಕರ ಆಶೀರ್ವಾದ ಪಡೆದಿವೆ. ಅವರು ನಮ್ಮೊಂದಿಗೆ ಬಂದು ಬಿಜೆಪಿ ವಿರುದ್ಧ ಬಲವಾದ ಸರ್ಕಾರವನ್ನು ರಚಿಸಬೇಕೆಂದು ನಾನು ಮನವಿ ಮಾಡುತ್ತೇನೆ ಎಂದರು.


ಇದಲ್ಲದೆ  ಬಿಜೆಪಿ ಕುದುರೆ ವ್ಯಾಪಾರ ಆರಂಭಿಸಿದೆ ಎಂದು ಭೂಪೇಂದ್ರ ಹೂಡಾ ಆರೋಪಿಸಿದ್ದಾರೆ. ಬಿಜೆಪಿ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಶಾಸಕರನ್ನು ಖರೀದಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ 'ಬಿಜೆಪಿ ವಿರೋಧಿ ಪಕ್ಷಗಳು ನಮ್ಮೊಂದಿಗೆ ಬರುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಭೂಪೇಂದ್ರ ಹೂಡಾ, ಕಾಂಗ್ರೆಸ್ ಕೈ ಜೋಡಿಸುವ ಎಲ್ಲರಿಗೂ ಸಮಾನ ಗೌರವ ಸಿಗಲಿದೆ' ಎಂದು ಭರವಸೆ ನೀಡಿದರು.


ಹರಿಯಾಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ರಾಜೀನಾಮೆ:
2019 ರ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸ ಹೊಂದಿದ್ದ ಬಿಜೆಪಿ ನಿರೀಕ್ಷೆ ಮಟ್ಟದಲ್ಲಿ ಜಯ ಸಾಧಿಸಲು ಸಾಧ್ಯವಾಗಿಲ್ಲ. ಅಲ್ಲದೆ ಖಟ್ಟರ್ ಸರ್ಕಾರದಲ್ಲಿ ಸಚಿವರಾಗಿದ್ದ ಕೆಲವರೂ ಕೂಡ ಸೋಲನುಭವಿಸಿದ್ದಾರೆ. ನಿರೀಕ್ಷಿತ ಫಲಿತಾಂಶ ದೊರೆಯದ ಕಾರಣ ಹರಿಯಾಣ ಬಿಜೆಪಿ ಅಧ್ಯಕ್ಷ ಸುಭಾಷ್ ಬರಾಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಅವರು ತಮ್ಮ ರಾಜೀನಾಮೆಯನ್ನು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಿಸಿದ್ದಾರೆ.