ಲಕ್ನೋ: ಅಲಾಹಾಬಾದ್ ನಗರದ ಹೆಸರನ್ನು ಬದಲಿಸಿ ಪ್ರಯಾಗ್​ರಾಜ್ ಎಂದು ಮರುನಾಮಕರಣ ಮಾಡಲಾಗಿದೆ. ಐದು ಶತಮಾನಗಳಿಂದ ಅಲಹಾಬಾದ್ ಹೆಸರಿನಲ್ಲಿ ಅಸ್ತಿತ್ವದಲ್ಲಿದ್ದ ಈ ನಗರ ಇನ್ಮುಂದೆ ಪ್ರಯಾಗ್​ರಾಜ್ ಆಗಲಿದೆ. ಅಲಹಾಬಾದ್ ನಗರಕ್ಕೆ ಪ್ರಯಾಗ್ ರಾಜ್ ಎಂದು ಮರುನಾಮಕರಣ ಮಾಡುವ ಗೊತ್ತುವಳಿಗೆ ಸಿಎಂ ಯೋಗಿ ಆದಿತ್ಯಾನಾಥ್ ನೇತೃತ್ವದ ಸಂಪುಟ ಸಭೆ ಅನುಮೋದನೆ ನೀಡಿದ್ದು, ಇಂದಿನಿಂದಲೇ ಅಲಹಾಬಾದ್ ನಗರವನ್ನು ಪ್ರಯಾಗ್ ರಾಜ್ ಎಂದು ಕರೆಯುವಂತೆ ಸುತ್ತೋಲೆ ಹೊರಡಿಸಲಾಗಿದೆ.


COMMERCIAL BREAK
SCROLL TO CONTINUE READING

ಉತ್ತರಪ್ರದೇಶದ ಪ್ರಮುಖ ನಗರವಾದ ಅಲಹಾಬಾದ್‌ ಅನ್ನು ಇಂದಿನಿಂದ 'ಪ್ರಯಾಗ್‌ರಾಜ್‌' ಎಂದು ಕರೆಯಲಾಗುತ್ತದೆ. ನಗರಕ್ಕೆ ಶೀಘ್ರವೇ 'ಪ್ರಯಾಗ್‌ರಾಜ್‌' ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮೊನ್ನೆ ಶನಿವಾರ ಪ್ರಕಟಿಸಿದ್ದರು. ಕುಂಭಮೇಳ ನಡೆಯುವ ಗಂಗಾ ಮತ್ತು ಯಮುನಾ ನದಿ ಸಂಗದ ಪ್ರದೇಶವನ್ನು ಇಲ್ಲಿಯವರೆಗೂ ಪ್ರಯಾಗ್ ಎಂದೇ ಕರೆಯಲಾಗುತ್ತಿತ್ತು. 2019ರ ಕುಂಭ ಮೇಳಕ್ಕೆ ಮುಂಚೆ ಹೆಸರು ಬದಲಾವಣೆ ಮಾಡುತ್ತೇವೆ ಎಂದು ತಿಳಿಸಿದ್ದರು. ಅದರಂತೆ ಹೆಸರು ಬದಲಾವಣೆ ಇಂದಿನಿಂದ ಜಾರಿಗೆ ಬಂದಿದೆ. 


ನೂತನ ಹೆಸರು ಇಂದಿನಿಂದ ಜಾರಿಗೆ ಬಂದಿರುವುದಾಗಿ ರಾಜ್ಯದ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರು ಹೇಳಿದ್ದು, ಅಲಹಾಬಾದ್ ಇನ್ನು ಮುಂದೆ ಪ್ರಯಾಗ್​ರಾಜ್ ಆಗಲಿದೆ ಎಂಬುದನ್ನು ತಿಳಿಸಲು ಸಂತೋಷ ಪಡುತ್ತೇನೆ. ಋಗ್ವೇದ, ಮಹಾಭಾರತ ಮತ್ತು ರಾಮಾಯಣದಲ್ಲೂ ಈ ಸ್ಥಳದ ಹೆಸರು ಪ್ರಯಾಗ್​ರಾಜ್ ಎಂದೇ ಉಲ್ಲೇಖವಾಗಿದೆ ಎಂದು ಹೇಳಿದರು.