ಅಲಹಾಬಾದ್ ವಿವಿ ನಿಯಮ ಅಖಿಲೇಶ್ಗೆ ಮೊದಲೇ ತಿಳಿದಿತ್ತು: ಸಿಎಂ ಯೋಗಿ
ರಾಜಕಾರಣಿಗಳಿಗೆ ವಿವಿಯ ಆವರಣ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅಲಹಾಬಾದ್ ವಿಶ್ವವಿದ್ಯಾಲಯವು ಅಖಿಲೇಶ್ ಯಾದವ್ ಅವರ ಭದ್ರತಾ ಸಿಬ್ಬಂದಿಗೆ ಪತ್ರ ಬರೆದಿತ್ತು.
ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್ರಾಜ್ (ಅಲಹಾಬಾದ್)ಗೆ ತೆರಳಲೆಂದು ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಪೊಲೀಸರು ತಡೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಲಹಾಬಾದ್ ವಿಶ್ವವಿದ್ಯಾಲಯದ ಯಾವುದೇ ಕಾರ್ಯಕ್ರಮಗಳಿಗೆ ರಾಜಕಾರಣಿಗಳಿಗೆ ಪ್ರವೇಶಾವಕಾಶ ಇರುವುದಿಲ್ಲ ಎಂಬುದನ್ನು ಉತ್ತರ ಪ್ರದೇಶದ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಗೆ ತಿಳಿಸಲಾಗಿತ್ತು. ರಾಜಕಾರಣಿಗಳಿಗೆ ವಿವಿಯ ಆವರಣ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅಲಹಾಬಾದ್ ವಿಶ್ವವಿದ್ಯಾಲಯವು ಅಖಿಲೇಶ್ ಯಾದವ್ ಅವರ ಭದ್ರತಾ ಸಿಬ್ಬಂದಿಗೆ ಪತ್ರ ಬರೆದಿತ್ತು.
ಆ ಪ್ರಕಾರ ಅಲಹಾಬಾದ್ ವಿವಿಯ ವಿದ್ಯಾರ್ಥಿ ನಾಯಕನ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲೆಂದು ಬಂದಿದ್ದ ಅಖೀಲೇಶ್ ಅವರನ್ನು ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳು ತಡೆದಿದ್ದರು. ಸಮಾಜವಾದಿ ಪಕ್ಷ ಇನ್ನಾದರೂ ತನ್ನ ಈ ಬಗೆಯ ಅರಾಜಕ ಚಟುವಟಿಕೆಗಳಿಂದ ದೂರ ಇರಬೇಕು'' ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಅಲಹಾಬಾದ್ ವಿಶ್ವವಿದ್ಯಾಲಯದ ಸಮಾಜವಾದಿ ಪಕ್ಷದ ವಿದ್ಯಾರ್ಥಿ ಘಟಕವು, ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭವನ್ನು ಇಂದು ನಿಗದಿ ಮಾಡಿತ್ತು. ಸಮಾರಂಭಕ್ಕೆ ಅಖಿಲೇಶ್ ಯಾದವ್ ಅವರನ್ನು ಆಹ್ವಾನಿಸಿತ್ತು. ಹೀಗಾಗಿ ಅಖಿಲೇಶ್ ಇಂದು ಅಲಹಾಬಾದ್ಗೆ ಪ್ರಯಾಣ ಬೆಳೆಸಿದ್ದರು. ವಿವಿಗೆ ತೆರಳಲೆಂದು ಲಖನೌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಪೊಲೀಸರು ಅಡ್ಡಗಟ್ಟಿದ್ದಾರೆ. ಅಲ್ಲದೆ, ಸಿವಿಲ್ ವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಕೈ ಅಡ್ಡವಿಟ್ಟು ಅಖಿಲೇಶ್ರನ್ನು ತಡೆದಿದ್ದಾರೆ. ಜತೆಗೇ, ವಿಶೇಷ ವಿಮಾನವೇರಲು ಅಖಿಲೇಶ್ ಪ್ರಯತ್ನಿಸಿದಾಗ ವಿಮಾನದ ಮೆಟ್ಟಿಲುಗಳಿಗೆ ಅಡ್ಡಲಾಗಿ ನಿಂತು ಪ್ರತಿರೋಧ ತೋರಿದ್ದಾರೆ. ಈ ಇಡೀ ಸನ್ನಿವೇಶದ ವಿಡಿಯೊ ಮತ್ತು ಚಿತ್ರಗಳನ್ನು ಅಖಿಲೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅಖಿಲೇಶ್ ಯಾದವ್, ವಿದ್ಯಾರ್ಥಿ ಘಟಕದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದ ವಿಚಾರದಲ್ಲಿ ಸರ್ಕಾರ ಭಯಭೀತಿಗೊಂಡಿದೆ. ಅದಕ್ಕಾಗಿಯೇ ನನ್ನನ್ನು ಏರ್ಪೋರ್ಟ್ನಲ್ಲಿ ತಡೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು ಅಖೀಲೇಶ್ ಯಾದವ್ ರನ್ನು ಏರ್ಪೋರ್ಟ್ನಲ್ಲಿ ತಡೆಯಲಾದ ಘಟನೆಯನ್ನು ಖಂಡಿಸಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ''ರಾಜ್ಯದಲ್ಲಿನ ಆಳುವ ಬಿಜೆಪಿ ಪ್ರಜಾಸತ್ತೆ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿರುವುದು ಸಂಪೂರ್ಣ ಸರ್ವಾಧಿಕಾರಕ್ಕೆ ಉದಾಹರಣೆಯಾಗಿದೆ ಎಂದು ಗುಡುಗಿದ್ದು ಬಿಜೆಪಿಗೆ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಕೂಟದ ಬಗ್ಗೆ ಭಯ ಇರುವುದು ಇದರಿಂದ ಸ್ಪಷ್ಟವಾಗಿ ತೋರುತ್ತಿದೆ'' ಎಂದಿದ್ದಾರೆ.