ಅಗ್ನಿಶಾಮಕ ಡಿಜಿ ಸ್ಥಾನಕ್ಕೆ ಅಲೋಕ್ ವರ್ಮಾ ರಾಜೀನಾಮೆ
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಅಲೋಕ್ ವರ್ಮಾ ಗುರುವಾರ ಮತ್ತೆ ಸಿಬಿಐ ನಿರ್ದೇಶಕರಾಗಿ ವೃತ್ತಿಗೆ ಹಾಜರಾಗಿದ್ದರು.
ನವದೆಹಲಿ: ಭ್ರಷ್ಟಾಚಾರ ಆರೋಪದ ಎದುರಿಸುತ್ತಿದ್ದ ಸಿಬಿಐ ಮಾಜಿ ಮುಖ್ಯಸ್ಥ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ವರ್ಮಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಗುರುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಕಮಿಟಿ ಸಭೆಯಲ್ಲಿ ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿ ಅವರನ್ನು ಅಗ್ನಿ ಶಾಮಕದಳದ ಪ್ರಧಾನಿ ನಿರ್ದೇಶಕ(ಡೈರಕ್ಟರ್ ಜನರಲ್) ಆಗಿ ವರ್ಗಾವಣೆ ಮಾಡಿತ್ತು.
ಕೇಂದ್ರ ತನಿಖಾ ದಳದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಲೋಕ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳಿಸಿತ್ತು. ಕೇಂದ್ರ ಸರ್ಕಾರದ ಈ ನಿರ್ಣಯವನ್ನು ಪ್ರಶ್ನಿಸಿ ಅಲೋಕ್ ವರ್ಮಾ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು. ಇದೇ ಎಂಟರಂದು ತೀರ್ಪು ನಿಡಿದ್ದ ಸುಪ್ರೀಂಕೇಂದ್ರದ ಆದೇಶವನ್ನು ತಿರಸ್ಕರಿಸಿ ಮತ್ತೆ ಅಲೋಕ್ ವರ್ಮಾ ಅವರನ್ನೇ ಸಿಬಿಐ ಮುಖ್ಯಸ್ಥನ ಹುದ್ದೆಗೆ ನೇಮಕ ಮಾಡಬೇಕೆಂದು ಆದೇಶಿಸಿತ್ತು.
ಮತ್ತೆ ಸಿಬಿಐ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಮರುದಿನವೇ ಆಯ್ಕೆ ಸಮಿತಿ ಅವರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಇದರಿಂದ ಬೇಸರಗೊಂಡ ಅಲೋಕ್ ವರ್ಮಾ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ.
ಇನ್ನು ಅಲೋಕ್ ವರ್ಮಾ ಅವರ ಅಧಿಕಾರಾವಧಿ ಇದೇ ಜನವರಿ 31 ರವರೆಗೆ ಇದ್ದು, ಅವರು ನಿವೃತ್ತರಾಗುವವರಿದ್ದರು ಎನ್ನಲಾಗಿದೆ.