ಮೂರನೇ ದಿನಕ್ಕೆ ಕಾಲಿಟ್ಟ ಅಮರನಾಥ ಯಾತ್ರೆ; 11,000 ಕ್ಕೂ ಹೆಚ್ಚು ಯಾತ್ರಿಕರಿಂದ ದರ್ಶನ!
ಅಮರನಾಥ ಯಾತ್ರೆ ಮೂರನೆ ದಿನಕ್ಕೆ ಕಾಲಿಟ್ಟಿದ್ದು, ಸುಮಾರು 11, 546 ಯಾತ್ರಿಕರು ದರ್ಶನ ಪೂರ್ಣಗೊಳಿಸಿದೆ.
ಜಮ್ಮು: ಅಮರನಾಥ ಯಾತ್ರೆ ಮೂರನೆ ದಿನಕ್ಕೆ ಕಾಲಿಟ್ಟಿದ್ದು, ಸುಮಾರು 11, 546 ಯಾತ್ರಿಕರು ದರ್ಶನ ಪೂರ್ಣಗೊಳಿಸಿದ್ದು, ಜಮ್ಮುವಿನಿಂದ ಮತ್ತೆ 4,600 ಯಾತ್ರಿಕರು ಅಮರನಾಥ ಗುಹಾ ದೇವಾಲಯಕ್ಕೆ ದರ್ಶನಕ್ಕೆ ತೆರಳಿದ್ದಾರೆ.
4,694 ಯಾತ್ರಿಗಳ ಮತ್ತೊಂದು ತಂಡ ಬುಧವಾರ ಬೆಳಿಗ್ಗೆ ಭಗವತಿ ನಗರ ಯಾತ್ರಿ ನಿವಾಸದಿಂದ ಕಾಶ್ಮೀರ ಕಣಿವೆಗೆ ಎರಡು ಬೆಂಗಾವಲುಗಳಲ್ಲಿ ಹೊರಟಿದೆ. ಈ ಪೈಕಿ 2,052 ಮಂದಿ ಬಾಲ್ಟಾಲ್ ಬೇಸ್ ಕ್ಯಾಂಪ್ ಮತ್ತು 2,642 ಮಂದಿ ಪಹಲ್ಗಂನಿಂದ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಶ್ಮೀರ ಹಿಮಾಲಯದಿಂದ ಸಮುದ್ರ ಮಟ್ಟ 3,888 ಮೀಟರ್ ಎತ್ತರದಲ್ಲಿರುವ ಈ ಗುಹಾ ದೇಗುಲವು ಐಸ್ ಸ್ಟಾಲಾಗ್ಮೈಟ್ ರಚನೆಯನ್ನು ಹೊಂದಿದೆ. ಇದು ಶಿವನ ಪೌರಾಣಿಕ ಶಕ್ತಿಗಳನ್ನು ಸಂಕೇತಿಸುತ್ತದೆ ಎಂಬುದು ಭಕ್ತರ ಮಾತು.
ಹಿಂದೂ ಸಹೋದರರು ವಾರ್ಷಿಕವಾಗಿ ಅಮರನಾಥ ಯಾತ್ರೆ ಕೈಗೊಳ್ಳಲು ಕಾಶ್ಮೀರಿ ಮುಸ್ಲಿಮರು ಹಿಂದಿನಿಂದಲೂ ಸಹಾಯ ಮಾಡುತ್ತಾ ಬಂದಿದ್ದಾರೆ. ಅಷ್ಟಕ್ಕೂ, ಈ ಗುಹಾ ದೇವಾಲಯವನ್ನು 1850ರಲ್ಲಿ ಕಂಡುಹಿಡಿದಿದ್ದೇ ಬೂತಾ ಮಲ್ಲಿಕ್ ಎಂಬ ಮುಸ್ಲಿಂ ಕುರುಬ.