ಕಾಶ್ಮೀರ: ಅಮರನಾಥ ಯಾತ್ರೆಗೆ ಕೈಗೊಂಡಿರುವ ಸಿದ್ಧತೆಗಳನ್ನು ಹೊರತುಪಡಿಸಿ, ಈ ಬಾರಿಯ ಅಮರನಾಥ ಯಾತ್ರೆ ಸ್ಥಳೀಯರ ದೈನಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಭಾನುವಾರ ಹೇಳಿದರು.


COMMERCIAL BREAK
SCROLL TO CONTINUE READING

45 ದಿನಗಳ ಕಾಲ ನಡೆಯುವ ಅಮರನಾಥ ಯಾತ್ರೆ ಕಳೆದ ವಾರ ಪ್ರಾರಂಭವಾಗಿದ್ದು, ಈವರೆಗೂ ಕನಿಷ್ಠ 67,000 ಯಾತ್ರಾರ್ಥಿಗಳು ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿರುವ ಪ್ರಾಚೀನ ಮತ್ತು ಪವಿತ್ರ ದೇಗುಲಕ್ಕೆ ತೆರಳಿದ್ದಾರೆ. ಭದ್ರತಾ ವ್ಯವಸ್ಥೆಗಳ ಬಗ್ಗೆ ವಿಶೇಷ ಗಮನಹರಿಸಲಾಗಿದ್ದು, ಅಮರನಾಥ ಯಾತ್ರೆ ಉದ್ದಕ್ಕೂ ಹಲವು ಸುರಕ್ಷಾ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮುಖ್ಯವಾಗಿ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದರೆ, ಭಾರತೀಯ ಸೇನೆ ಮತ್ತು ಗಡಿ ಭದ್ರತಾ ಪಡೆಗಳ ಸಿಬ್ಬಂದಿಯನ್ನು ಸಹ ಎರಡೂ ಮಾರ್ಗಗಳಲ್ಲಿ ನಿಯೋಜಿಸಲಾಗಿದೆ. ಆದಾಗ್ಯೂ, ಯಾತ್ರೆಯಿಂದ ಸ್ಥಳೀಯರಿಗೆ ಅನಾನುಕೂಲವಾಗುತ್ತಿದೆ ಎಂದು ಮೆಹಬೂಬಾ ಹೇಳಿದ್ದಾರೆ. 


"ಅಮರನಾಥ ಯಾತ್ರೆ ವರ್ಷಗಳಿಂದ ನಡೆಯುತ್ತಿದೆ. ಆದರೆ, ಈ ವರ್ಷ ಅಮರನಾಥ ಯಾತ್ರೆಗಾಗಿ ಕೈಗೊಂಡಿರುವ ಭದ್ರತಾ ಕ್ರಮಗಳು ಕಾಶ್ಮೀರದ ಜನರ ವಿರುದ್ಧವಾಗಿವೆ. ಇದು ಸ್ಥಳೀಯ ಜನರ ದಿನನಿತ್ಯದ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನುಂಟು ಮಾಡುತ್ತಿದೆ" ಎಂದು ಮೆಹಬೂಬಾ ಮುಫ್ತಿ ಹೇಳಿಕೆ ನೀಡಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.


ಸ್ಥಳೀಯ ನಿವಾಸಕ್ಕೆ ಅನಾನುಕೂಲವಾಗುತ್ತಿರುವ ಕಾರಣದ ಬಗ್ಗೆ ಸ್ಪಷ್ಟ ವಿವರಣೆ ನೀಡದ ಮೆಹಬೂಬ, ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳಲು ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಸತ್ಯ ಪಾಲ್ ಮಲಿಕ್ ಅವರನ್ನು ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ. "ಈ ವಿಚಾರವಾಗಿ ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ನಾನು ವಿನಂತಿಸುತ್ತೇನೆ" ಎಂದು ಅವರು ತಿಳಿಸಿದರು.


ಪ್ರತಿವರ್ಷ ಅಮರನಾಥ ಯಾತ್ರೆ ಸಮಯದಲ್ಲಿ ಯಾತ್ರಾರ್ಥಿಗಳ ಸುರಕ್ಷತೆ ಮತ್ತು ಯೋಗಕ್ಷೇಮ ಆದ್ಯತೆಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಅಂತೆಯೇ 45 ದಿನಗಳ ಅಮರನಾಥ ಯಾತ್ರೆ ಸಂದರ್ಭದಲ್ಲಿ ಸ್ಥಳೀಯರು ಎಂದಿನಂತೆ ತಮ್ಮ ದೈನಂದಿನ ಜೀವನವನ್ನು ಮುಂದುವರೆಸಲು ವಿಶೇಷ ಕಾಳಜಿ ವಹಿಸಲಾಗುತ್ತದೆ. ಜೊತೆಗೆ ಅಮರನಾಥ ಯಾತ್ರೆಗೆ ಸ್ಥಳೀಯರ ಬೆಂಬಲ ಮತ್ತು ಸಹಯೋಗವನ್ನು ಆಗಾಗ್ಗೆ ಕೋರಲಾಗಿದೆ. ಇದು ಯಾತ್ರೆಯ ಯಶಸ್ಸನ್ನು ಖಾತ್ರಿಪಡಿಸುವ ಅವಿಭಾಜ್ಯ ಅಂಗವಾಗಿದೆ. ಇದಕ್ಕೆ ಪ್ರತಿಯಾಗಿ, ಸ್ಥಳೀಯ ವ್ಯಾಪಾರ- ವ್ಯವಹಾರದ ಮೇಲೂ ಕೂಡ ಇದು ಪ್ರಭಾವ ಬೀರುತ್ತದೆ. 


ಈ ವರ್ಷ ಕೂಡ ಅಮರನಾಥ ದೇಗುಲ ಮಂಡಳಿ ಸ್ಥಳೀಯರ ಉತ್ತಮ ಸಹಕಾರಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.