ಉತ್ತರ ಪ್ರದೇಶದಲ್ಲಿ ಅಂಬೇಡ್ಕರ್ ಪ್ರತಿಮೆ ಭಗ್ನ
ಲಕ್ನೋ: ಉತ್ತರ ಪ್ರದೇಶದ ಅಜಂಘಡ್ ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ ಮೂರ್ತಿಯನ್ನು ಮೂವರು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ. ಆದರೆ ಈವರೆಗೂ ಅವರನ್ನು ಬಂಧಿಸಿಲ್ಲ ಎಂದು ಹೇಳಲಾಗಿದೆ.
ಶನಿವಾರದಂದು ಈ ದುಷ್ಕರ್ಮಿಗಳು ಅಂಬೇಡ್ಕರ್ ಪ್ರತಿಮೆಯ ತಲೆ ಭಾಗವನ್ನು ಭಗ್ನಗೊಳಿಸಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಡಿಐಜಿ ಅಜಯ್ ಭೂಷಣ್ " ಆ ಮೂವರು ಆರೋಪಿಗಳನ್ನು ಗುರುತಿಸಲಾಗಿದ್ದು, ಈಗ ತಲೆಮೆರೆಸಿಕೊಂಡಿದ್ದಾರೆ, ಸದ್ಯದಲ್ಲೇ ಅವರನ್ನು ಬಂಧಿಸಲಾಗುವುದು" ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ತ್ರಿಪುರಾದಲ್ಲಿ ಬಿಜೆಪಿ ಕಾರ್ಯಕರ್ತರು ಲೆನಿನ್ ಪ್ರತಿಮೆಯನ್ನು ನೆಲ ಸಮಗೊಳಿಸಿದ ನಂತರ ದೇಶದೆಲ್ಲಡೆ ಮೂರ್ತಿಗಳನ್ನು ಭಗ್ನಗೊಳಿಸುವ ಪ್ರಕರಣಗಳು ಹೆಚ್ಚಾಗಿವೆ. ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆಯನ್ನು ಭಗ್ನಗೊಳಿಸಿದ ಘಟನೆಗೆ ಕೂಡಾ ದೇಶದಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು, ಈ ಘಟನೆಗಳು ಇನ್ನು ಮಾಸುವ ಮುನ್ನವೇ ಅಂಬೇಡ್ಕರ್ ಮೂರ್ತಿಯನ್ನು ಭಗ್ನಗೊಳಿಸಿದ್ದಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.