ನವದೆಹಲಿ: ಮಹಾತ್ಮ ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಮೂವರು ಬಿಜೆಪಿ ನಾಯಕರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ 10 ದಿನಗಳೊಳಗೆ ಉತ್ತರಿಸುವಂತೆ ಆದೇಶಿಸಿದ್ದಾರೆ. ಅಲ್ಲದೆ, ಈ ಹೇಳಿಕೆಗಳು ಅವರ ವೈಯಕ್ತಿಕ ಹೇಳಿಕೆಗಳೇ ಹೊರತು ಪಕ್ಷಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. 


COMMERCIAL BREAK
SCROLL TO CONTINUE READING


ಬಿಜೆಪಿ ನಾಯಕರಾದ ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆ, ನಳೀನ್ ಕುಮಾರ್ ಕಟೀಲ್ ಮತ್ತು ಭೋಪಾಲ್ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ನಾಥೂರಾಮ್ ಗೋಡ್ಸೆ ಬಗ್ಗೆ ಹೇಳಿಕೆಗಳನ್ನು ನೀಡಿ ಬಳಿಕ ಕ್ಷಮೆಯಾಚಿಸಿದ್ದರು. 



ಪ್ರಗ್ಯಾ ಸಿಂಗ್ ಠಾಕೂರ್
ಕೆಲ ದಿನಗಳ ಹಿಂದೆ ಮಕ್ಕಳ್ ನೀದಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್, ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ ಒಬ್ಬ ಹಿಂದೂ ಆಗಿದ್ದ. ಆತನೇ ನಾಥೂರಾಮ್ ಗೋಡ್ಸೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಗುರುವಾರ ಪ್ರತಿಕ್ರಿಯಿಸಿದ್ದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್, ನಾಥೂರಾಮ್ ಗೋಡ್ಸೆ ಒಬ್ಬ ಅಪ್ಪಟ ದೇಶಭಕ್ತ. ಈಗಲೂ ದೇಶಭಕ್ತರೇ ಹಾಗೂ ಮುಂದೆಯೂ ದೇಶಭಕ್ತರಾಗಿಯೇ ಉಳಿಯುತ್ತಾರೆ ಎಂದು ಹೇಳಿದ್ದರು. ಪ್ರಗ್ಯಾ ನೀಡಿದ್ದ ಈ ಹೇಳಿಕೆಗೆ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಬಿಜೆಪಿ ನಾಯಕರ ಒತ್ತಾಯಕ್ಕೆ ಮಣಿದು ಪ್ರಜ್ಞಾ ಕ್ಷಮೆ ಕೇಳಿದ್ದರು.


ಅನಂತ್ ಕುಮಾರ್ ಹೆಗಡೆ
ಪ್ರಗ್ಯಾ ಹೇಳಿಕೆಗೆ ಪ್ರತಿಕ್ರಿಯಿಸಿ "7 ದಶಕಗಳ ನಂತರ ಇಂದಿನ ಪೀಳಿಗೆಯು, ಬದಲಾದ ಸನ್ನಿವೇಶದಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತಿರುವುದು ಖುಷಿ ತಂದಿದೆ. ಈ ಚರ್ಚೆಯಿಂದ ನಾಥೂರಾಂ ಗೋಡ್ಸೆಗೆ ಖುಷಿಯಾಗಿರಬಹುದು" ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್​ ಮಾಡಲಾಗಿತ್ತು. 


ಆದರೆ ಬಳಿಕ ಈ ಬಗ್ಗೆ ಎಚ್ಚೆತ್ತುಕೊಂಡ ಹೆಗಡೆ ಅವರು, ಹಳೆಯ ಟ್ವೀಟ್ ಅನ್ನು ಡಿಲೀಟ್ ಮಾಡಿ, "ಕಳೆದ ಒಂದು ವಾರದಲ್ಲಿ ನನ್ನ ಟ್ವಿಟರ್​​ ಖಾತೆ ಎರಡು ಬಾರಿ ಹ್ಯಾಕ್ ಆಗಿತ್ತು. ನನ್ನ ಟೈಮ್​ಲೈನ್ ಮೇಲೆ ಕೆಲವು ಟ್ವೀಟ್​​ಗಳನ್ನ ಹಾಕಲಾಗಿತ್ತು. ಅವುಗಳನ್ನ ಸದ್ಯ ಡಿಲೀಟ್​ ಮಾಡಲಾಗಿದೆ. ನನ್ನ ಹೆಸರಿನಲ್ಲಿ ಆಗಿದ್ದ ಪೋಸ್ಟ್​ಗಳಿಗೆ ವಿಷಾದಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, "ಗಾಂಧೀಜಿ ಹತ್ಯೆಗೆ ಯಾವುದೇ ಸಮರ್ಥನೆ ಅಥವಾ ಅನುಕಂಪ ಇಲ್ಲ. ದೇಶಕ್ಕೆ ಗಾಂಧೀಜಿ ನೀಡಿದ ಕೊಡುಗೆ ಬಗ್ಗೆ ನಮಗೆಲ್ಲಾ ಅಪಾರ ಗೌರವವಿದೆ" ಎಂದು ಟ್ವೀಟ್​ ಮಾಡಿದ್ದಾರೆ.



ನಳೀನ್ ಕುಮಾರ್ ಕಟೀಲ್
ಮತ್ತೊಂದೆಡೆ ಕರ್ನಾಟಕದ ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್ ಅವರು, "ಗೋಡ್ಸೆ ಅನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿಗೆ ಹೋಲಿಸಿ, ಅವರು ಹತ್ಯೆಯಾದ 30 ವರ್ಷಗಳ ಬಳಿಕ ಲೋಕಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷದ ಮುಖ್ಯ ವಿಷಯವಸ್ತು ಆಗಿದ್ದಾರೆ" ಎಂದು ಟ್ವೀಟ್ ಮಾಡಿದ್ದರು.  ಬಳಿಕ "ನನ್ನ  ಕೊನೆಯ ಎರಡು ಟ್ವೀಟ್ ಗಳಿಗೆ ಟೀಕೆ ವ್ಯಕ್ತವಾಗಿದ್ದನ್ನು ಗಮನಿಸಿದ್ದೇನೆ. ಯಾರಿಗಾದರೂ ಅದರಿಂದ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನೋವಾಗಿದೆಯೆಂದು ತಿಳಿದ ತಕ್ಷಣ ಟ್ವೀಟ್ ಹಿಂಪಡೆದಿದ್ದೇನೆ. ಚರ್ಚೆ ಇಲ್ಲಿಗೆ ಮುಗಿಸೋಣ" ಎಂದು ಟ್ವೀಟ್ ಮಾಡಿದ್ದಾರೆ.



ಇಷ್ಟೆಲ್ಲಾ ವಿವಾದಗಳ ಬಳಿಕ ಈ ಮೂವರೂ ನಾಯಕರ ವಿರುದ್ಧ ಕ್ರಮ ಕೈಗೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ 10ದಿನಗಳೊಳಗೆ ಉತ್ತರಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಮೂವರೂ ನಾಯಕರಿಗೆ ನೋಟಿಸ್ ಜಾರಿಗೊಳಿಸುವಂತೆ ಬಿಜೆಪಿ ಶಿಸ್ತು ಸಮಿತಿಗೆ ಅಮಿತ್ ಶಾ ಆದೇಶಿಸಿದ್ದಾರೆ.