ಹರಿಯಾಣ-ಮಹಾರಾಷ್ಟ್ರದಲ್ಲಿ ಮೈತ್ರಿ; ಇಂದು ಬಿಜೆಪಿ ಕೋರ್ ಗ್ರೂಪ್ ಸಭೆ ಕರೆದ ಅಮಿತ್ ಶಾ
ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಅಮಿತ್ ಶಾ ಬಿಜೆಪಿ ಕೋರ್ ಗ್ರೂಪ್ ಸಭೆ ಕರೆದಿದ್ದಾರೆ.
ನವದೆಹಲಿ: ಹರಿಯಾಣ ಮತ್ತು ಮಹಾರಾಷ್ಟ್ರದ ಎರಡು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮಿತ್ರ ಪಕ್ಷಗಳೊಂದಿಗೆ ಮೈತ್ರಿ ಬಗೆಗಿನ ಸಮಸ್ಯೆ ಬಗ್ಗೆ ಚರ್ಚಿಸಲು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಗುರುವಾರ ಪಕ್ಷದ ಉನ್ನತ ನಾಯಕರ ಮಹತ್ವದ ಸಭೆ ನಡೆಸಲಿದ್ದಾರೆ.
ಭಾನುವಾರದಂದು ನಡೆಯಲಿರುವ ನಿರ್ಣಾಯಕ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಗೂ ಮೊದಲೇ ಗುರುವಾರ ಸಭೆ ಕರೆಯಲಾಗಿದೆ. ಇಂದು ನಡೆಯುವ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯ ಕೋರ್ ಸಮಿತಿ ಮುಖಂಡರು ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿಯ ಹರಿಯಾಣ ಉಸ್ತುವಾರಿ ಅನಿಲ್ ಜೈನ್ ಮತ್ತು ಹರಿಯಾಣ ಚುನಾವಣಾ ಉಸ್ತುವಾರಿ ನರೇಂದ್ರ ಸಿಂಗ್ ತೋಮರ್ ಇತರರು ಭಾಗವಹಿಸಲಿದ್ದಾರೆ. ಭಾನುವಾರ ನಡೆಯಲಿರುವ ಪ್ರಮುಖ ಸಿಇಸಿ ಸಭೆಗೂ ಮೊದಲು ಅಭ್ಯರ್ಥಿಗಳು ಮತ್ತು ಪಕ್ಷದ ಮತದಾನದ ಕಾರ್ಯತಂತ್ರವನ್ನು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟದಲ್ಲಿ ಇನ್ನೂ ಅನಿಶ್ಚಿತತೆ ಮುಂದುವರೆದಿರುವುದರಿಂದ ಈ ಸಭೆ ಮಹತ್ವದ್ದಾಗಿದೆ. ಇದಲ್ಲದೆ ಮುಖ್ಯವಾಗಿ, ಹರಿಯಾಣದಲ್ಲಿ ಮೈತ್ರಿ ಕುರಿತು ಚರ್ಚಿಸಲು ನಡ್ಡಾ ಮಂಗಳವಾರ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರನ್ನು ಭೇಟಿ ಮಾಡಿದ್ದರು. ಭಾನುವಾರ ಸಿಇಸಿ ಸಭೆಯ ನಂತರ ಹರಿಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ.
ಚುನಾವಣಾ ಆಯೋಗವು ನಾಮಪತ್ರ ಸಲ್ಲಿಸಲು ಅಕ್ಟೋಬರ್ 4 ರಂದೇ ಕೊನೆಯ ದಿನಾಂಕವೆಂದು ನಿಗದಿಪಡಿಸಿದ್ದರಿಂದ ಕೇಸರಿ ಪಕ್ಷಕ್ಕೆ ಮೈತ್ರಿ ಬಗ್ಗೆ ನಿರ್ಧರಿಸಲು ಕೆಲವೇ ಸಮಯ ಉಳಿದಿದೆ. 90 ಸದಸ್ಯರ ಬಲ ಹೊಂದಿರುವ ಹರಿಯಾಣ ವಿಧಾನಸಭೆ ಅಕ್ಟೋಬರ್ 21 ರಂದು ಚುನಾವಣೆಗೆ ಹೋಗಲಿದ್ದು, ಅಕ್ಟೋಬರ್ 24 ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಎರಡನೇ ಅವಧಿಗೆ ಮರಳಬೇಕಾದರೆ ಈಗಿನ ಮುಖ್ಯಮಂತ್ರಿಯನ್ನು ಪುನರಾವರ್ತಿಸಲು ಇಚ್ಚಿಸುವುದಾಗಿ ಘೋಷಿಸಿದೆ.
ಮಹಾರಾಷ್ಟ್ರದಲ್ಲಿ, ಪಕ್ಷವು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಜೊತೆ ಮೈತ್ರಿ ಘೋಷಿಸಬೇಕಿದೆ. ಕೇಸರಿ ಪಕ್ಷ ಮತ್ತು ಶಿವಸೇನೆ 2014 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿ ಸ್ಥಾನ ಹಂಚಿಕೆ ಸೂತ್ರವನ್ನು ತಲುಪಲು ವಿಫಲವಾದವು.
ಆದರೆ, ಯಾರೊಬ್ಬರೂ ಸ್ವಂತವಾಗಿ ಬಹುಮತವನ್ನು ಪಡೆದುಕೊಳ್ಳಲು ಸಾಧ್ಯವಾಗದ ಕಾರಣ ಅವರು ಚುನಾವಣೆಯ ನಂತರ ಮೈತ್ರಿಕೂಟದಲ್ಲಿ ಸರ್ಕಾರವನ್ನು ರಚಿಸಿದರು. ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದೆ. ಮತ ಎಣಿಕೆ ಅಕ್ಟೋಬರ್ 24 ರಂದು ನಡೆಯಲಿದೆ.