ಪ್ರಧಾನಿ ಮೋದಿಯ ಪಕೋಡಾ ಹೇಳಿಕೆ ಸಮರ್ಥಿಸಿಕೊಂಡ ಅಮಿತ್ ಶಾ..!
ನವದೆಹಲಿ: ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ಖಾಸಗಿ ಟಿವಿಯೊಂದರ ಸಂದರ್ಶನದ ವೇಳೆ ಪಕೋಡಾ ಮಾರುವುದು ಕೂಡ ಉದ್ಯೋಗವೆಂದು ಅಭಿಪ್ರಾಯಪಟ್ಟಿದ್ದರು.
ಪ್ರಧಾನಿ ಮೋದಿಯವರ ಈ ಹೇಳಿಕೆ ನೀಡಿದ ನಂತರ ದೇಶದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು, ಅಲ್ಲದೆ ನಿನ್ನೆ ಬೆಂಗಳೂರಿನಲ್ಲಿ ನಡೆದ ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ವಿದ್ಯಾರ್ಥಿಗಳು ಘಟಿಕೋತ್ಸವದ ಗೌನ್ ಧರಿಸಿ ಸಾಂಕೇತಿಕವಾಗಿ ರಸ್ತೆಗಳಲ್ಲಿ ಪಕೋಡ ಮಾರುವುದರ ಮೂಲಕ ಪ್ರಧಾನಮಂತ್ರಿಗಳ ಹೇಳಿಕೆಯನ್ನು ಖಂಡಿಸಿದ್ದರು.
ಆದರೆ ಈ ಎಲ್ಲ ವಿರೋಧಗಳ ನಡುವೆಯೂ ಮೋದಿಯವರ ಪಕೋಡದ ಹೇಳಿಕೆಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರವರು ಸಮರ್ಥಿಸಿಕೊಂಡಿದ್ದಾರೆ.! ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುತ್ತಾ ಮಾತನಾಡಿದ ಶಾ ಪಕೋಡ ಮಾರುವುದು ನಾಚಿಕೆಯ ಸಂಗತಿಯಲ್ಲ, ಅದು ನಿರುದ್ಯೋಗಿಯಾಗಿರುವುದಕ್ಕಿಂತ ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜನವರಿ 19 ರಂದು ಪ್ರಧಾನಿ ನರೇಂದ್ರ ಮೋದಿ ಝೀ ನ್ಯೂಸಗೆ ನೀಡಿದ ಸಂದರ್ಶನದ ವೇಳೆ ಉದ್ಯೋಗ ಸೃಷ್ಟಿಯ ಕುರಿತು ಮಾತನಾಡುತ್ತಾ ವ್ಯಕ್ತಿಯೊಬ್ಬನು ಪಕೋಡಾ ಮಾರಿ ಅದರಿಂದ ಪ್ರತಿ ಸಾಯಂಕಾಲ ಮನೆಗೆ 200 ರೂಗಳ ಆದಾಯ ತೆಗೆದುಕೊಂಡು ಹೋಗುವುದು ಉದ್ಯೋಗವಲ್ಲವೆ ಎಂದು ಉತ್ತರಿಸಿದ್ದರು.
ಈ ಹೇಳಿಕೆಗೆ ಸಾಮಾಜಿಕ ಜಾಲತಾಣಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು, ಸರ್ಕಾರ ಕಳೆದ ಮೂರುವರೆ ವರ್ಷದಲ್ಲಿ ಉದ್ಯೋಗ ಸೃಷ್ಟಿಸಲು ವಿಫಲವಾಗಿದ್ದರಿಂದಾಗಿ ಪ್ರಧಾನಿಯವರು ಈಗ ಅಸಹಾಯಕರಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಖಂಡಿಸಿದ್ದರು.