ಬಿಜೆಪಿಗೆ ಬೆಂಬಲ ಕೋರಿ ರತನ್ ಟಾಟಾ,ಮಾಧುರಿ ದೀಕ್ಷಿತ್ ಭೇಟಿ ಮಾಡಿದ ಅಮಿತ್ ಶಾ
ಮುಂಬೈ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂಬರುವ 2019 ರ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ದೇಶದ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ.
ಅದರ ಭಾಗವಾಗಿ ಬುಧುವಾರದಂದು ಮುಂಬೈನಲ್ಲಿ ಉದ್ಯಮಿ ರತನ್ ಟಾಟಾ ಹಾಗೂ ನಟಿ ಮಾಧುರಿ ದೀಕ್ಷಿತ್ ರನ್ನು ಭೇಟಿ ಮಾಡಿದರು.ಈ ವೇಳೆ ಅಮಿತ ಶಾ ಜೊತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಸಾಥ್ ನೀಡಿದರು.
ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಯಲ್ಲಿ ಹಲವು ಭಿನ್ನಾಭಿಪ್ರಾಯಗಳು ಬಂದ ಹಿನ್ನಲೆಯಲ್ಲಿ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಅಮಿತ್ ಶಾ ಮುಂಬೈನಲ್ಲಿರುವ ಉದ್ದವ್ ಠಾಕ್ರೆಯವರೊಂದಿಗೆ ಭೇಟಿ ಮಾಡಿ ಚರ್ಚಿಸಿದರು.
ಮುಂಬರುವ ಲೋಕಸಭಾ ಚುನಾವಣೆಯು ಬಿಜೆಪಿಗೆ ಮಹತ್ವದ್ದಾಗಿರುವುದರಿಂದ ಈಗ ಅದು ತನ್ನ ಮೈತ್ರಿ ಪಕ್ಷಗಳ ನಡುವೆ ಇರುವ ಬಿರುಕುಗಳನ್ನು ಸರಿಪಡಿಸುವ ಯೋಜನೆಯನ್ನು ಹಾಕಿಕೊಂಡಿದೆ.ಇದಲ್ಲದೆ ದೇಶದ ಪ್ರಮುಖ ಗಣ್ಯರನ್ನು ಭೇಟಿ ಮಾಡುವುದರ ಮೂಲಕ ಮುಂಬರುವ ಚುನಾವಣೆಗೆ ಅವರ ಬೆಂಬಲವನ್ನು ಕೋರುತ್ತಿದೆ ಅದರ ಭಾಗವಾಗಿ ಅದು ಸಂಪರ್ಕ ಫಾರ್ ಸಮರ್ಥನ್ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.