ಭಯೋತ್ಪಾದನೆ ವಿರುದ್ಧ ಮನಮೋಹನ್ ಸಿಂಗ್ ಪ್ರಬಲರಾಗಿರಲಿಲ್ಲ ಎಂದ ಹೇಳಿದ ಶೀಲಾ ದೀಕ್ಷಿತ್ ಗೆ ಥ್ಯಾಂಕ್ಸ್: ಅಮಿತ್ ಷಾ
`ಇದುವರೆಗೂ ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳಲು ಸಿದ್ಧವಿಲ್ಲದ ಸತ್ಯವನ್ನು ತಾವು ಒಪ್ಪಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು` ಎಂದು ಅಮಿತ್ ಷಾ ಟ್ವೀಟ್ ಮಾಡಿದ್ದಾರೆ.
ನವದೆಹಲಿ: ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಜರುಗಿಸಿದವರಲ್ಲಿ ಮನಮೋಹನ್ ಸಿಂಗ್ ಗಿಂತ ಪ್ರಧಾನಿ ಮೊದಿ ಉತ್ತಮ ಎಂದಿದ್ದ ದೆಹಲಿ ಮಾಜಿ ಪ್ರಧಾನಿ ಶೀಲಾ ದೀಕ್ಷಿತ್ ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಧನ್ಯವಾದ ಹೇಳಿದ್ದಾರೆ.
"ಇದುವರೆಗೂ ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳಲು ಸಿದ್ಧವಿಲ್ಲದ ಸತ್ಯವನ್ನು ತಾವು ಒಪ್ಪಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು" ಎಂದು ಅಮಿತ್ ಷಾ ಟ್ವೀಟ್ ಮಾಡಿದ್ದಾರೆ.
ಗುರುವಾರ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಶೀಲಾ ದೀಕ್ಷಿತ್, "ಭಯೋತ್ಪಾದನೆ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿಯಷ್ಟು ನಿಷ್ಠುರವಾಗಿರಲಿಲ್ಲ, ಕಠಿಣ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ" ಎಂದು ಹೇಳಿದ್ದರು.
26/11 ಮುಂಬೈ ದಾಳಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರಂತೆ ಕಠಿಣ ಕ್ರಮಗಳನ್ನು ಮನಮೋಹನ್ ಸಿಂಗ್ ತೆಗೆದುಕೊಳ್ಳಲಿಲ್ಲ. ಪುಲ್ವಾಮಾ ದಾಳಿ ಬಳಿಕ ಭಯೋತ್ಪಾದಕರನ್ನು ಸೆದೆಬಡಿಯಲು ಪ್ರಧಾನಿ ಮೋದಿ ಅವರು ದೃಢ ನಿಲುವು ತಾಳಿದರು. ಭಾರತೀಯ ವಾಯು ಸೇನೆ ಪಾಕಿಸ್ತಾನದಲ್ಲಿ ಉಗ್ರರ ಶಿಬಿರಗಳನ್ನು ದ್ವಂಸ ಮಾಡಿತು ಎಂದು ಹೇಳಿದ್ದ ಶೀಲಾ ದೀಕ್ಷಿತ್, ಮೋದಿ ಸರ್ಕಾರ ಇದನ್ನೆಲ್ಲಾ ಮಾಡಿದ್ದು ರಾಜಕೀಯ ಲಾಭಕ್ಕಾಗಿ ಎಂದು ಟೀಕಿಸಿದ್ದರು.