ಮುಂಬೈ:  ಸಾರ್ವತ್ರಿಕ ಚುನಾವಣೆಗೆ ಇನ್ನು ಒಂದು ವರ್ಷವಷ್ಟೇ ಬಾಕಿ ಇದೆ. ಮೈತ್ರಿಕೂಟದ ಪ್ರಮುಖ ಪಕ್ಷವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಸಂಬಂಧಗಳು ಕುಸಿದಿದೆ. ಬಿಜೆಪಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬುಧವಾರ ಭೇಟಿಯಾಗಲಿದ್ದಾರೆ. ಬಿಜೆಪಿ ಮೂಲಗಳು ತಿಳಿಸಿರುವಂತೆ ಬುಧವಾರ ಸಂಜೆ ಮುಂಬೈಗೆ ಆಗಮಿಸಲಿರುವ ಅಮಿತ್ ಶಾ, ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲಿದ್ದಾರೆ. ಮುಂಬೈನಲ್ಲಿರುವ ಉದ್ಧವ್ ಠಾಕ್ರೆ ಅವರ ನಿವಾಸ ಮಾತೋಶ್ರೀಗೆ ಸಂಜೆ 6ಗಂಟೆಗೆ ಅಮಿತ್ ಶಾ ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಈ ಸಮಯದಲ್ಲಿ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಅಮಿತ್ ಶಾ ಓಲೈಸುವ ಪ್ರಯತ್ನ ಮಾಡಲಿದ್ದಾರೆ. ಅಲ್ಲದೆ 2019ರ ಲೋಕಸಭಾ ಚುನಾವಣೆಯಲ್ಲೂ ಎನ್ ಡಿಎ ಮೈತ್ರಿಕೂಟದಲ್ಲೇ ಇರುವಂತೆ ಮನವಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಳೆದ ವರ್ಷ ಜುಲೈನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮಿತ್ ಶಾ ಮತ್ತು ಉದ್ಧವ್ ಠಾಕ್ರೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಈಗ ಸುಮಾರು ಒಂದು ವರ್ಷದ ನಂತರ, ಎರಡು ಪಕ್ಷಗಳ ಮುಖ್ಯಸ್ಥರು ಒಟ್ಟಾಗಿ ಭೇಟಿಯಾಗಲಿದ್ದಾರೆ. ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಹಾಗೂ ಬಿಜೆಪಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಶಿವಸೇನಾ ಮುಖ್ಯಸ್ಥರನ್ನು ಬಿಜೆಪಿ ಅಧ್ಯಕ್ಷ ಶಾ ಭೇಟಿ ಮಾಡುತ್ತಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.