ಉತ್ತರ ಪ್ರದೇಶದ ಕುಶಿನಗರದಲ್ಲಿ ಐಎಎಫ್ನ ಜಗ್ವಾರ್ ವಿಮಾನ ಪತನ
ಒಂದು ವರ್ಷದೊಳಗೆ ಪತನಗೊಂಡ ಎರಡನೇ ಜಗ್ವಾರ್ ವಿಮಾನ ಇದಾಗಿದ್ದು, ಕಳೆದ ವರ್ಷ ಜೂನ್ ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು.
ಭಾರತೀಯ ವಾಯುಪಡೆಯ (ಐಎಎಫ್) ಜಗ್ವಾರ್ ವಿಮಾನ ಸೋಮವಾರ ಉತ್ತರಪ್ರದೇಶದ ಕುಶಿನಗರದಲ್ಲಿ ಪತನಗೊಂಡಿದ್ದು, ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ ಸುಮಾರು 300 ಕಿ.ಮೀ. ದೂರದಲ್ಲಿ ಈ ಘಟನೆ ಸಂಭವಿಸಿದೆ. ಫ್ಲೈಟ್ ಭೂಮಿಗೆ ಅಪ್ಪಳಿಸಿದೊಡನೆ ಬೆಂಕಿ ಹೊತ್ತಿಕೊಂಡಿದೆ. ವಿಮಾನ ಪತನಕ್ಕೂ ಮೊದಲೇ ಪೈಲಟ್ ಪ್ಯಾರಾಚೂಟ್ ಸಹಾಯದಿಂದ ಧುಮುಕಿ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ.
ಗೋರಖ್ಪುರ ಏರ್ ಫೋರ್ಸ್ ಬೇಸ್ನಿಂದ ಈ ಫೈಟರ್ ವಿಮಾನವು ಹೊರಟಿತು. ಅಪಘಾತಕ್ಕೆ ಒಳಗಾಗಿರುವ ಈ ಜಗ್ವಾರ್ ಫೈಟರ್ ತನ್ನ ವಾಡಿಕೆಯ ಕಾರ್ಯಾಚರಣೆಯಲ್ಲಿತ್ತು ಎಂದು ಐಎಎಫ್ ತಿಳಿಸಿದೆ. ಈ ಘಟನೆಯನ್ನು ತನಿಖೆ ಮಾಡಲು ಆದೇಶಿಸಲಾಗಿದೆ.
ಈ ಘಟನೆಯ ಸುದ್ದಿ ಮತ್ತು ಸ್ಫೋಟದ ಶಬ್ದದ ಬಳಿಕ ಸಮೀಪದ ಗ್ರಾಮಸ್ಥರು ಗುಂಪು ಸೇರಿದ್ದಾರೆ. ಆದಾಗ್ಯೂ, ಅಪಘಾತದ ಕಾರಣ ಏನು ಎಂಬುದು ಅಸ್ಪಷ್ಟವಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದರು. ಅಪಘಾತದಲ್ಲಿ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.