ಲೋಕಸಭೆಯಲ್ಲೂ ಪ್ರತಿಧ್ವನಿಸಿದ ಅನಂತಕುಮಾರ್ ಹೆಗಡೆ ಹೇಳಿಕೆ; ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ವಿಪಕ್ಷಗಳ ಆಗ್ರಹ
ಒಬ್ಬ ವ್ಯಕ್ತಿಯಾಗಿ ಸಂವಿಧಾನವನ್ನು ಒಪ್ಪಲು ಸಾಧ್ಯವಿಲ್ಲವೆಂದಾದರೆ, ಆ ವ್ಯಕ್ತಿಗೆ ಸಂಸತ್ ಸದಸ್ಯನಾಗಿ ಮುಂದುವರಿಯಲು ಯಾವುದೇ ಹಕ್ಕಿಲ್ಲ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಹೇಳಿದರು.
ನವ ದೆಹಲಿ : ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಇತ್ತೀಚೆಗೆ ನೀಡಿದ್ದ ವಿವಾದಿತ ಹೇಳಿಕೆ ಇಂದು ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. ಬುಧವಾರ ಕಲಾಪ ಆರಂಭವಾದಾಗ ವಿರೋಧ ಪಕ್ಷಗಳು ಹೆಗಡೆ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದವು.
ಕಾಂಗ್ರೆಸ್, ಎಸ್ ಪಿ ಮತ್ತು ಬಿಎಸ್ ಪಿ ಪಕ್ಷಗಳು ಅನಂತಕುಮಾರ್ ಹೆಗ್ಡೆ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ ಅವರನ್ನು ಕೇಂದ್ರ ಸ್ಥಾನದಿಂದ ವಜಾ ಗೊಳಿಸುವಂತೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಹೆಗಡೆ ಅವಮಾನಿಸಿರುವುದಾಗಿ ವಿಪಕ್ಷಗಳು ವಾಗ್ದಾಳಿ ನಡೆಸಿದವು.
ಸದನದಲ್ಲಿ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಅವರು ತಮ್ಮ ವಾದವನ್ನು ಮಂಡಿಸುವ ಸಂದರ್ಭದಲ್ಲಿ `ಶೇಮ್ ಶೇಮ್' ಎಂದು ಹೆಗಡೆ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ವಿಪಕ್ಷಗಳು ಸದನದಲ್ಲಿ ಗದ್ದಲ ಆರಂಭಿಸಿದವು.
ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಗುಲಾಂ ನಬಿ ಅಜಾದ್ ಸಚಿವ ಅನಂತಕುಮಾರ್ ಹೆಗ್ಡೆ ಅವರ ಸಂವಿಧಾನ ವಿರುದ್ಧದ ಹೇಳಿಕೆಗೆ ಉತ್ತರಿಸುವಂತೆ ಆಗ್ರಹಿಸಿದರು.
ಆದರೆ ''ಬಿಜೆಪಿ ಸಂವಿಧಾನದಲ್ಲಿನ ಜಾತ್ಯತೀತ ಎಂಬ ಪದವನ್ನು ಪೀಠಿಕೆಯಿಂದ ತೆಗೆದುಹಾಕುವ ಮೂಲಕ ತಿದ್ದುಪಡಿ ಮಾಡಲಿದೆ'' ಎಂದು ಇತ್ತೀಚೆಗೆ ಅನಂತ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದು, ನಿಜವಾದ್ದರಿಂದ ಸದನದಲ್ಲಿ ಗದ್ದಲ ಆರಂಭವಾಗುತ್ತಿದ್ದಂತೆ, ಅಲ್ಲಿಂದ ಹೊರಟುಹೋದರು.
ಒಬ್ಬ ವ್ಯಕ್ತಿಯಾಗಿ ಸಂವಿಧಾನವನ್ನು ಒಪ್ಪಲು ಸಾಧ್ಯವಿಲ್ಲವೆಂದಾದರೆ, ಆ ವ್ಯಕ್ತಿಗೆ ಸಂಸತ್ ಸದಸ್ಯನಾಗಿ ಮುಂದುವರಿಯಲು ಯಾವುದೇ ಹಕ್ಕಿಲ್ಲ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಹೇಳಿದರು.
ಹೀಗೆ ಸದನದಲ್ಲಿ ಉಂಟಾದ ತೀವ್ರ ಗದ್ದಲದಿಂದಾಗಿ ಲೋಕಸಭೆ ಕಲಾಪವನ್ನು ಮುಂದೂಡಲಾಯಿತು. ರಾಜ್ಯಸಭೆಯಲ್ಲಿಯೂ ವಿಪಕ್ಷಗಳು ಸಚಿವ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದವು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಹೆಗಡೆ ಅವಮಾನಿಸಿರುವುದಾಗಿ ವಿಪಕ್ಷಗಳು ವಾಗ್ದಾಳಿ ನಡೆಸಿದವು.
ಇತ್ತೀಚೆಗೆ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರಿನಲ್ಲಿ ನಡೆದ ಬ್ರಾಹ್ಮಣ ಮಹಾಸಭಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹೆಗ್ಡೆ ಅವರು, ಯಾವನೇ ಒಬ್ಬ ಮುಸ್ಲಿಂ ಆಗಲಿ, ಬ್ರಾಹ್ಮಣ ಆಗಲಿ, ಕ್ರೈಸ್ತನಾಗಲಿ ತಾನು ಇಂತಹ ಜಾತಿಗೆ ಸೇರಿದವನು ಎಂದು ಹೇಳಿಕೊಂಡರೆ ಅಂಥವರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ಆದರೆ, ಜಾತ್ಯತೀತರು ಎಂದು ಹೇಳಿಕೊಳ್ಳುವವರ ಬಗ್ಗೆ ಅನುಮಾನ ಮೂಡುತ್ತದೆ. ಜಾತ್ಯತೀತರಿಗೆ, ವಿಚಾರವಾದಿಗಳಿಗೆ ತಮ್ಮ ಅಪ್ಪ–ಅಮ್ಮನ ಗುರುತೇ ಇಲ್ಲ’ ಎಂದು ಹೇಳಿಕೆ ನೀಡಿದ್ದರು. ಇದು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಹಳ ವಿವಾದವನ್ನೇ ಉಂಟುಮಾಡಿದೆ. ಆದರೀಗ ಈ ಹೇಳಿಕೆ ಲೋಕಸಭೆಯಲ್ಲೂ ಪ್ರತಿಧ್ವನಿಸುವ ಮೂಲಕ ಹೆಗಡೆ ಅವರನ್ನು ಸಂಪುಟದಿಂದ ಉಚ್ಚಾಟಿಸುವಂತೆ ವಿಪಕ್ಷಗಳು ಆಗ್ರಹಿಸಿವೆ.