ಇಂದು ಅಮಿತ್ ಶಾ ಭೇಟಿ ಮಾಡಲಿರುವ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ
ನಾಳೆ(ಜೂನ್ 15) ವೈಎಸ್ಆರ್ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ ಹಿನ್ನೆಲೆಯಲ್ಲಿ ಇಂದು ಸಂಜೆ ದೆಹಲಿಗೆ ಆಗಮಿಸಲಿರುವ ಜಗನ್ ಬಳಿಕ ಅಮಿತ್ ಷಾ ಅವರನ್ನು ಭೇಟಿ ಮಾಡಲಿದ್ದಾರೆ.
ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಶುಕ್ರವಾರ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಅಮಿತ್ ಶಾ ಭೇಟಿಯಾಗುತ್ತಿರುವ ಜಗನ್ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಜಗನ್ ರೆಡ್ಡಿ ಸಂಜೆ 6 ಗಂಟೆ ಬಳಿಕ ಅಮಿತ್ ಶಾ ಭೇಟಿ ಮಾಡಲಿದ್ದಾರೆ.
ನಾಳೆ(ಜೂನ್ 15) ವೈಎಸ್ಆರ್ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ ಹಿನ್ನೆಲೆಯಲ್ಲಿ ಇಂದು ಸಂಜೆ ದೆಹಲಿಗೆ ಆಗಮಿಸಲಿರುವ ಜಗನ್ ಬಳಿಕ ಅಮಿತ್ ಷಾ ಅವರನ್ನು ಭೇಟಿ ಮಾಡಲಿದ್ದಾರೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ಜಗನ್ ಅಧ್ಯಕ್ಷತೆಯಲ್ಲಿ ಸಂಸದೀಯ ಪಕ್ಷದ ಸಭೆಯ ನಡೆಯಲಿದ್ದು, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಲೋಕಸಭೆಯ ಎಲ್ಲಾ 22 ಸಂಸದರು ಮತ್ತು ರಾಜ್ಯಸಭೆಯ 2 ಸಂಸದರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಇತ್ತೀಚೆಗೆ ನಡೆದ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿ ಅವರ ವೈಎಸ್ಆರ್ಸಿಪಿ 175 ಸ್ಥಾನಗಳಲ್ಲಿ 151 ಸ್ಥಾನಗಳನ್ನುಗೆಲ್ಲುವ ಮೂಲಕ ಸಂಪೂರ್ಣ ಬಹುಮತವನ್ನು ಪಡೆದು ಸರ್ಕಾರ ರಚಿಸಿದೆ. ನೂತನ ಸರ್ಕಾರದ ಮುಖ್ಯಮಂತ್ರಿಯಾಗಿ ಜಗನ್ ಮೋಹನ್ ರೆಡ್ಡಿ ಮೇ 30ರಂದು ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯ ವಿಭಜನೆಯ ಬಳಿಕ ಆಂಧ್ರಪ್ರದೇಶದ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ.