ಅಂಗಾಂಗ ದಾನಕ್ಕೆ ಮುಂದಾದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
ಚಾಲನಾ ಪರವಾನಿಗೆ ಪಡೆಯಲು ಅಂಗಾಂಗ ದಾನವನ್ನು ಕಡ್ಡಾಯ ಮಾಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸೋಮವಾರ ತಿಳಿಸಿದ್ದಾರೆ.
ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ತಮ್ಮ ದೇಹದ ಅಂಗಾಂಗ ದಾನ ಮಾಡುವುದಾಗಿ ಸೋಮವಾರ ತಿಳಿಸಿದ್ದಾರೆ.
ಇಂದಿನಿಂದ ಆರಂಭವಾಗಿರುವ ಅಂಗಾಂಗ ದಾನ ಸಪ್ತಾಹದಲ್ಲಿ ಭಾಗವಹಿಸಿ ಜನತೆಗೆ ಅಂಗಾಂಗ ದಾನ ಮಾಡಳು ಕರೆ ನಿದಿದರಲ್ಲದೆ, ಸ್ವತಃ ತಾವೂ ಅಂಗಾಂಗ ದಾನ ಮಾಡುವುದಾಗಿ ಘೋಷಣೆ ಮಾಡಿದರು.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕರೆಗೆ ಸ್ಪಂದಿಸಿದ ನಗರಸಭೆ ಪ್ರದೇಶಗಳ ಬಡತನ ನಿರ್ಮೂಲನೆ ಮಿಷನ್(ಎಂಇಪಿಎಂಎ) ಅಂಗಾಂಗ ದಾನವನ್ನು ಒಂದು ಆಂದೋಲನವಾಗಿ ಸ್ವೀಕರಿಸಿದೆ. ಇದರಿಂದಾಗಿ ಕೇವಲ ಒಂದೇ ದಿನದಲ್ಲಿ ಸುಮಾರು 1.20 ಲಕ್ಷ ಜನರು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನಕ್ಕೆ ಮುಂದಾದರು. ಎಂಇಪಿಎಂಎ ದಾನಿಗಳಿಂದ ಒಪ್ಪಿಗೆ ಪತ್ರಗಳನ್ನು ಸಂಗ್ರಹಿಸಿ, ಸರ್ಕಾರದ ಕಾರ್ಯಕ್ರಮವಾದ 'ಜೀವದಾನ' ಕಾರ್ಯಕ್ರಮದಡಿಯಲ್ಲಿ ಚಂದ್ರಬಾಬು ನಾಯ್ಡು ಅವರಿಗೆ ಒಪ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್.ಚಂದ್ರಬಾಬು ನಾಯ್ಡು ಅವರು, "ಅಪಘಾತ ಸಂದರ್ಭಗಳಲ್ಲಿ ಮೆದುಳು ನಿಷ್ಕ್ರಿಯಗೊಂಡರೆ, ಆ ವ್ಯಕ್ತಿಯ ಅಂಗಾಂಗ ದಾನ ಮಾಡಿದರೆ ಅಗತ್ಯವಿರುವವರಿಗೆ ಪುನರ್ಜನ್ಮ ನೀಡಿದಂತಾಗುತ್ತದೆ. ಜನರು ತಮ್ಮ ಮೂಢನಂಬಿಕೆಗಳಿಂದ ಹೊರಬಂದು ಅಂಗಾಂಗ ದಾನಕ್ಕೆ ಮುಂದಾಗಬೇಕು. ಅಂಗಾಂಗ ದಾನ ವಿಷಯವನ್ನು ಶಾಲಾ-ಕಾಲೇಜುಗಳ ಪಾಠಗಳಲ್ಲಿ ಅಳವಡಿಸಲಾಗುವುದು. ಅಲ್ಲದೆ, ಚಾಲನಾ ಪರವಾನಿಗೆ ಪಡೆಯಲು ಅಂಗಾಂಗ ದಾನವನ್ನು ಕಡ್ಡಾಯ ಮಾಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ, ದೆಹಲಿ ಮೂಲದ "ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್" ಪ್ರತಿನಿಧಿ ರಾಕೇಶ್ ವರ್ಮಾ ಅವರು ಇದನ್ನು ಸ್ಫೂರ್ತಿದಾಯಕ ದಾಖಲೆಯಾಗಿ ಗುರುತಿಸಿರುವುದಾಗಿ ಘೋಷಿಸಿದರು.