ಸಿಎಎ ವಿರೋಧಿ ಪ್ರತಿಭಟನೆ: ಹಲವೆಡೆ ಇಂಟರ್ನೆಟ್ ಸೇವೆ ಸ್ಥಗಿತ
ಟೆಲಿಕಾಂ ಸೇವಾ ಪೂರೈಕೆದಾರ ಭಾರ್ತಿ ಏರ್‌ಟೆಲ್‌ನ ಗ್ರಾಹಕ ಆರೈಕೆ ಗುರುವಾರ (ಡಿಸೆಂಬರ್ 19) ಹೊಸ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ಧ್ವನಿ ಕರೆಗಳು, ಎಸ್‌ಎಂಎಸ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ಗ್ರಾಹಕರಿಗೆ ತಿಳಿಸಿದೆ.
ನವದೆಹಲಿ: ಹೊಸ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ಧ್ವನಿ ಕರೆಗಳು, ಎಸ್‌ಎಂಎಸ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿರುವುದಾಗಿ ಟೆಲಿಕಾಂ ಸೇವಾ ಪೂರೈಕೆದಾರ ಭಾರ್ತಿ ಏರ್‌ಟೆಲ್‌ನ ಗ್ರಾಹಕ ಆರೈಕೆ ಗುರುವಾರ (ಡಿಸೆಂಬರ್ 19) ತನ್ನ ಗ್ರಾಹಕರಿಗೆ ತಿಳಿಸಿದೆ.
ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ, ಭಾರ್ತಿ ಏರ್‌ಟೆಲ್ ಕಸ್ಟಮರ್ ಕೇರ್, "ನಾವು ಸರ್ಕಾರದಿಂದ ಪಡೆದ ಸೂಚನೆಗಳನ್ನು ಪಾಲಿಸುತ್ತಿದ್ದೇವೆ. ಸರ್ಕಾರದ ನಿರ್ದೇಶನದ ಮೇರೆಗೆ ದೆಹಲಿಯ ಕೆಲವು ಪ್ರದೇಶಗಳಲ್ಲಿ ಧ್ವನಿ, ಎಸ್‌ಎಂಎಸ್ ಮತ್ತು ಡೇಟಾ ಸೇವೆಯನ್ನು ಅಮಾನತುಗೊಳಿಸಿರುವುದಾಗಿ" ಟ್ವೀಟ್ ಮಾಡಿದ್ದಾರೆ. "ಅಮಾನತು ಆದೇಶಗಳನ್ನು ತೆಗೆದುಹಾಕಿದ ನಂತರ, ನಮ್ಮ ಸೇವೆಗಳು ಸಂಪೂರ್ಣವಾಗಿ ಚಾಲನೆಯಲ್ಲಿರುತ್ತವೆ" ಎಂದು ಭಾರ್ತಿ ಏರ್‌ಟೆಲ್ ಮಾಹಿತಿ ನೀಡಿದೆ.
ಮತ್ತೊಂದು ಟೆಲಿಕಾಂ ಸೇವಾ ಪೂರೈಕೆದಾರ ವೊಡಾಫೋನ್, ದೆಹಲಿಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವುದನ್ನು ದೃಢಪಡಿಸಿದೆ.
ರಾಷ್ಟ್ರೀಯ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(CAA)ಯ ವಿರುದ್ಧದ ಪ್ರತಿಭಟನೆಗಳು ಗುರುವಾರ ಹಲವೆಡೆ ಹಿಂಸಾತ್ಮಕವಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂದು ಮೊಬೈಲ್ ಸೇವಾ ನಿರ್ವಾಹಕರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಸಾರ್ವಜನಿಕರು ಐಟಿಒ ಪ್ರದೇಶದಾದ್ಯಂತ “ನಿಧಾನಗತಿಯ ಅಂತರ್ಜಾಲ ಸೇವೆಗಳ” ಬಗ್ಗೆ ಟ್ವಿಟರ್‌ನಲ್ಲಿ ದೂರು ನೀಡಿದ್ದರು. ಇದಾದ ಸ್ವಲ್ಪ ಸಮಯದ ನಂತರ ಏರ್‌ಟೆಲ್ ಕೆಲವು ಭಾಗಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸುವುದನ್ನು ದೃಢಪಡಿಸಿತು.
ಕೆಂಪು ಕೋಟೆ ಪ್ರದೇಶದಲ್ಲಿ ಮತ್ತು ದೆಹಲಿಯ ಉತ್ತರ ಭಾಗದಲ್ಲಿ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 144 ಅನ್ನು ವಿಧಿಸಿದ್ದಾರೆ. ಆದಾಗ್ಯೂ, ನಗರದ ಪ್ರಮುಖ ಪ್ರದೇಶಗಳಲ್ಲಿ ಪ್ರತಿಭಟನೆ ಮುಂದುವರೆದಿದೆ. ಶಾಹೀದ್ ಪಾರ್ಕ್‌ನಿಂದ ಕೆಂಪು ಕೋಟೆಗೆ ಮತ್ತು ಮಂಡಿ ಹೌಸ್ ನಿಂದ ಪಾರ್ಲಿಮೆಂಟ್ ಸ್ಟ್ರೀಟ್‌ಗೆ ಹೋಗುವ ದಾರಿಯಲ್ಲಿ ಹೆಚ್ಚಿನ ಪ್ರತಿಭಟನೆಗಳು ನಡೆಯುತ್ತಿವೆ.
ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಮತ್ತು ರಾಜಕಾರಣಿ ಸೇರಿದಂತೆ ಹಲವಾರು ಜನರನ್ನು ಗುರುವಾರ ಬಂಧಿಸಲಾಯಿತು. ಕಾಂಗ್ರೆಸ್ ಮುಖಂಡ ಸಂದೀಪ್ ದೀಕ್ಷಿತ್ ಅವರನ್ನು ಮಂಡಿ ಹೌಸ್ ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಎಡ ಪಕ್ಷದ ಮುಖಂಡರಾದ ಸೀತಾರಾಮ್ ಯೆಚೂರಿ, ಪ್ರಕಾಶ್ ಕರತ್, ಬೃಂದಾ ಕರತ್ ಮತ್ತು ಡಿ ರಾಜಾ ಅವರನ್ನು ಬಂಧಿಸಲಾಯಿತು.
ಏತನ್ಮಧ್ಯೆ, ರಾಷ್ಟ್ರೀಯ ರಾಜಧಾನಿಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕಾಂಗ್ರೆಸ್ ಪಕ್ಷ ಟೀಕಿಸಿದೆ. ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್, "ಸರ್ಕಾರದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವುದು ಪ್ರತಿಯೊಬ್ಬ ನಾಗರಿಕನ ಪ್ರಜಾಪ್ರಭುತ್ವದ ಹಕ್ಕು. # ಸೆಕ್ಷನ್ 144 ಮತ್ತು ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯು ಭಾರತೀಯರು ಏನು ಹೇಳಬೇಕೆಂಬುದನ್ನು ಕೇಳಿ ಭಯಭೀತರಾಗಿರುವ ಸರ್ಕಾರದಿಂದ ನಾಗರಿಕರನ್ನು ಬಾಯಿ ಮುಚ್ಚಿಸುವ ಕಠಿಣ ಕ್ರಮಗಳಾಗಿವೆ. ಇದಕ್ಕಾಗಿ ಬಿಜೆಪಿ ನಾಚಿಕೆಪಡಬೇಕು ಎಂದು ಟೀಕಾಪ್ರಹಾರ ನಡೆಸಿದೆ.