ಮೂರು ವರ್ಷದ ಬಾಲಕಿ ಮೇಲೆ ಭದ್ರತಾ ಸಿಬ್ಬಂದಿಯಿಂದಲೇ ಅತ್ಯಾಚಾರ
ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ದೆಹಲಿಯ ದೀನ್ ದಯಾಳ್ ಉಪಧ್ಯಾಯ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ನವದೆಹಲಿ: ಮೂರು ವರ್ಷದ ಬಾಲಕಿ ಮೇಲೆ ಅಪಾರ್ಟ್ಮೆಂಟ್ ಭದ್ರತಾ ಸಿಬ್ಬಂದಿಯೋರ್ವ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಭಾನುವಾರ ಮಧ್ಯಾಹ್ನ ದೆಹಲಿಯಲ್ಲಿ ನಡೆದಿದೆ.
ದ್ವಾರಕಾದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ರಂಜಿತ್, ಅದೇ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ತಂದೆ- ತಾಯಿ ಯಾವುದೋ ಕೆಲಸದ ನಿಮಿತ್ತ ಮಗಳನ್ನು ಮನೆಯಲ್ಲಿ ಬಿಟ್ಟು, ಅವಳನ್ನು ನೋಡಿಕೊಳ್ಳುವಂತೆ ರಂಜಿತ್ ಗೆ ಹೇಳಿದ್ದರು ಎನ್ನಲಾಗಿದೆ. ಆದರೆ, ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ರಂಜಿತ್ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ದೆಹಲಿಯ ದೀನ್ ದಯಾಳ್ ಉಪಧ್ಯಾಯ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಿಯರು ಆರೋಪಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ, ಬಳಿಕ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.