ಬಾಲಕೋಟ್‌ನಲ್ಲಿ ಉಗ್ರರು ಮತ್ತೆ ಸಕ್ರಿಯ; ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಸುಮಾರು 500 ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.
ನವದೆಹಲಿ: ಬಾಲಕೋಟ್‌ನಲ್ಲಿ ಮತ್ತೆ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿಕೆ ನೀಡಿದ್ದಾರೆ.
ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ 46 ಸಿಆರ್‌ಪಿಎಫ್ ಜವಾನರ ಹುತಾತ್ಮತೆಗೆ ಪ್ರತೀಕಾರ ತೀರಿಸುವ ಸಲುವಾಗಿ, ಭಾರತೀಯ ವಾಯುಪಡೆಯು ಬಾಲಕೋಟ್‌ನ ಭಯೋತ್ಪಾದಕ ಶಿಬಿರಗಳಲ್ಲಿ ವಾಯುದಾಳಿ ನಡೆಸಿತು. ಮತ್ತೆ ಅಂತಹದ್ದೇ ದಾಳಿ ನಡೆಯಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ರಾವತ್, ಅದೇ ಕ್ರಮ (ವಾಯುದಾಳಿ) ಮತ್ತೆ ಸಂಭವಿಸುತ್ತದೆ ಎಂದು ನೀವು ಏಕೆ ಭಾವಿಸುತ್ತೀರಿ. ನಾವು ಏನು ಮಾಡಲಿದ್ದೇವೆ ಎಂದು ಇನ್ನೊಂದು ಬದಿಯ ಜನರು ಯೋಚಿಸಲಿ ಎಂದರು.
'ಭಯೋತ್ಪಾದಕರ ಒಳನುಸುಳುವಿಕೆಗಾಗಿ ಪಾಕಿಸ್ತಾನ ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸಿದೆ. ಕದನ ವಿರಾಮ ಉಲ್ಲಂಘನೆಯನ್ನು ಹೇಗೆ ಎದುರಿಸಬೇಕೆಂದು ನಮಗೆ ತಿಳಿದಿದೆ. ಎದುರಾಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ನಮ್ಮ ಸೈನಿಕರು ಅರಿತಿದ್ದಾರೆ. ಕನಿಷ್ಠ 500 ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಾವು ಜಾಗರೂಕರಾಗಿರುತ್ತೇವೆ ಮತ್ತು ಗರಿಷ್ಠ ಒಳನುಸುಳುವಿಕೆಯನ್ನು ತಡೆಯುವುದನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಸದ್ಯ ಈಗಾಗಲೇ ಕಾಶ್ಮೀರ ಕಣಿವೆಯಲ್ಲಿ ಅವಿತಿರುವ ಉಗ್ರರು ಮತ್ತು ಪಾಕಿಸ್ತಾನದಲ್ಲಿರುವ ಅವರ ಮುಖ್ಯಸ್ಥರ ನಡುವೆ ಸಂವಹನ ಸ್ಥಗಿತಗೊಂಡಿದೆ ಎಂದು ತಿಳಿಸಿದ ಸೇನಾ ಮುಖ್ಯಸ್ಥರು, ಜನರಿಂದ ಜನರ ಸಂಪರ್ಕ ಇನ್ನೂ ಉಳಿದಿವೆ. ಸೇನೆ ಎಂತಹ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧವಾಗಿದೆ. ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶ ಸಾರಿದ್ದಾರೆ.