ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ಮುಂದುವರೆಯಲಿದೆ: ಬಿಪಿನ್ ರಾವತ್
ಜಮ್ಮು ಮತ್ತು ಕಾಶ್ಮೀರದಲ್ಲಿ ಪೂರ್ವನಿಗದಿಯಂತೆ ಸೇನಾ ನಿಯಮಗಳ ಅಡಿಯಲ್ಲಿ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆ ಮುಂದುವರೆಸಲಿವೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಶುಕ್ರವಾರ ತಿಳಿಸಿದ್ದಾರೆ.
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪೂರ್ವನಿಗದಿಯಂತೆ ಸೇನಾ ನಿಯಮಗಳ ಅಡಿಯಲ್ಲಿ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಗಳನ್ನು ಮುಂದುವರೆಸಲಿವೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಶುಕ್ರವಾರ ತಿಳಿಸಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಹೇಳಿಕೆ ನೀಡಿರುವ ರಾವತ್, "ಸೈನ್ಯವು ಒಪ್ಪಂದದಂತೆ ಕಟ್ಟುನಿಟ್ಟಾದ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ ಮತ್ತು ಮುಂದೆಯೂ ಕಾರ್ಯನಿರ್ವಹಿಸುತ್ತೇವೆ" ಎಂದು ಎಎನ್ಐಗೆ ಹೇಳಿದ್ದಾರೆ.
"ಕಾಶ್ಮೀರದಲ್ಲಿ ಸೈನ್ಯ ಮತ್ತು ಭದ್ರತಾ ಪಡೆಗಳು ಕ್ರೂರವಾಗಿ ತಮ್ಮ ಕಾರ್ಯಾಚರಣೆಗಳನ್ನು ನಡೆಸುತ್ತಿವೆ ಎಂಬ ವರದಿಗಳು ಕೇಳಿಬಂದಿದೆ. ಆದರೆ ಅವೆಲ್ಲಾ ಸತ್ಯಕ್ಕೆ ದೂರವಾದುದು. ನಮ್ಮ ಗುರಿ ಏನಿದ್ದರೂ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರವನ್ನು ಉಂಟುಮಾಡುವ ಭಯೋತ್ಪಾದಕರನ್ನು ಸೆದೆಬಡಿಯುವುದು. ಈ ನಿಟ್ಟಿನಲ್ಲಿ ನಾವು ಜನಸ್ನೇಹಿ ಕಾರ್ಯಾಚರಣೆ ನಡೆಸುತ್ತಿದ್ದೇವೆ" ಎಂದು ಅವರು ಹೇಳಿದರು.
ಇದಕ್ಕೂ ಮುನ್ನ, ಶುಕ್ರವಾರ ಬೆಳಿಗ್ಗೆ ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತ್ರೆಹ್ಗಂ ಪ್ರದೇಶದಲ್ಲಿ ಓರ್ವ ಭಯೋತ್ಪಾದಕನನ್ನು ಸೇನಾ ಪಡೆ ಎನ್ಕೌಂಟರ್ ಮಾಡಿದೆ. ಉಳಿದಂತೆ ಕಾರ್ಯಾಚರಣೆ ಮುಂದುವರೆದಿದೆ.