ನವದೆಹಲಿ : ''ಸೇನೆಯಲ್ಲಿರುವವರು ಸಾಯಲೆಂದೇ ಇದ್ದಾರೆ'' ಎಂಬ ಹೇಳಿಕೆ ನೀಡುವ ಮೂಲಕ ಬಿಜೆಪಿ(ಭಾರತಿಯ ಜನತಾ ಪಕ್ಷ) ಸಂಸದ ನೇಪಾಳ್ ಸಿಂಗ್ ಭಾರಿ ವಿವಾದಕ್ಕೆ ಕಾರಣವಾಗಿದ್ದಾರೆ. 


COMMERCIAL BREAK
SCROLL TO CONTINUE READING

ಕಳೆದ ಭಾನುವಾರ ಸಿಆರ್ಪಿಎಫ್ ಶಿಬಿರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ  ಯೋಧರಿಗೆ ಸಂಬಂಧಿಸಿದಂತೆ ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನೇಪಾಳ್ ಸಿಂಗ್, ಯೋಧರು ಸಾಯದೇ ಇರದ ಯಾವ ರಾಷ್ಟ್ರವೂ ಇಲ್ಲ ಎಂದಿದ್ದಾರೆ. 


"ಸೇನೆಯಲ್ಲಿ ಪ್ರತಿನಿತ್ಯ ಯೋಧರು ಸಾಯುತ್ತಿರುತ್ತಾರೆ. ಯೋಧರು ಸಾಯದೆ ಇರುವ ಯಾವುದಾದರೂ ಒಂದು ರಾಷ್ಟ್ರದ ಉದಾಹರಣೆ ಕೊಡಿ" ಎಂದು ಸಿಂಗ್ ಪ್ರಶ್ನಿಸಿದ್ದಾರೆ.


ಅಲ್ಲದೆ "ರಣರಂಗದ ಮಾತು ಹಾಗಿರಲಿ; ಗ್ರಾಮವೊಂದರಲ್ಲಿ ಗಲಭೆ, ಕಾದಾಟ ನಡೆದಾಗ ಯಾರಾದರೂ ಸಾಯುತ್ತಾರೆ; ಮನುಷ್ಯನನ್ನು ಸಾಯದೇ ಉಳಿಸುವಂತಹ ಯಾವುದಾದರೂ ಔಷಧಿ ಇದೆಯೇ, ಹೇಳಿ?" ಎಂದು ನೇಪಾಲ್‌ ಸಿಂಗ್‌ ತಮ್ಮನ್ನು ಸಮರ್ಥಿಸಿಕೊಂಡರು. 


"ಯಾವುದೇ ಪರಿಣಾಮ ಉಂಟು ಮಾಡದ ಬುಲೆಟ್‌ಗಳು ಇವೆಯೇ ಹೇಳಿ ನೋಡೋಣ; ಅಂಥದ್ದೇನಾದರೂ ಇದ್ದರೆ ನಾವೇ ಮೊದಲು ಅವುಗಳನ್ನು ಬಳಸುತ್ತೇವೆ" ಎಂದು ನೇಪಾಲ್‌ ಸಿಂಗ್‌ ತಮ್ಮ ಹೇಳಿಕೆಗೆ ಚಿತ್ರ ವಿಚಿತ್ರ ಸಮರ್ಥನೆಯನ್ನು ನೀಡತೊಡಗಿದರು. 



ಸೈನಿಕರು ಸಾಯಲೆಂದೇ ಇರುವವರು ಎಂಬ ತನ್ನ ಹೇಳಿಕೆಯಿಂದ ಉಂಟಾದ ಆಕ್ರೋಶಕ್ಕೆ ಉತ್ತರವಾಗಿ ಸಿಂಗ್‌, "ನಾನು ಹುತಾತ್ಮ ಸೈನಿಕರನ್ನು ಅವಮಾನಿಸಲು ಹಾಗೆ ಹೇಳಿಲ್ಲ; ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ" ಎಂದು ಹೇಳಿದರು. 


"ಹುತಾತ್ಮ ಸೈನಿಕರ ತ್ಯಾಗವು ಎಂದೂ ನಿಷ್ಪಲವಾಗದು; ಅವರು ತೋರಿರುವ ಧೈರ್ಯ, ಸ್ಥೈರ್ಯ, ಹಾಗೂ ವೀರತನಕ್ಕೆ ಸೂಕ್ತ ಗೌರವ ಕೊಡಲಾಗುವುದು" ಎಂದು ಕೇಂದ್ರ ಗೃಹ ಸಚಿವ ರಾಜನಾ‌ಥ್‌ ಸಿಂಗ್‌ ನಿನ್ನೆ ಸೋಮವಾರ ಹೇಳಿದ್ದರು. ಅದಾದ ನಂತರದಲ್ಲಿ ಸಿಂಗ್‌ ಅವರ ಪ್ರತಿಕ್ರಿಯೆ ಬಂದಿದೆ.