ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರದಂದು ರಾಷ್ಟ್ರದ ರಾಜಧಾನಿಯಲ್ಲಿ ಉಚಿತ ವೈ-ಫೈ ಇಂಟರ್ನೆಟ್ ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಘೋಷಿಸಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಕೇಜ್ರಿವಾಲ್ ಪ್ರತಿ ಬಳಕೆದಾರರಿಗೆ 15 ಜಿಬಿ ಡೇಟಾವನ್ನು ಉಚಿತವಾಗಿ ಪ್ರತಿ ತಿಂಗಳು 200 ಎಂಬಿಪಿಎಸ್ ವೇಗದಲ್ಲಿ ಇಂಟರ್ ನೆಟ್ ನೀಡಲಾಗುವುದು ಎಂದು ಹೇಳಿದರು.



COMMERCIAL BREAK
SCROLL TO CONTINUE READING

ಮೊದಲ ಹಂತದ ಭಾಗವಾಗಿ ದೆಹಲಿಯಾದ್ಯಂತ 11,000 ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲಾಗುವುದು.ಈಗಾಗಲೇ ಉಚಿತ ವೈ-ಫೈ ಒದಗಿಸುವ ಕೆಲಸ ಪ್ರಾರಂಭವಾಗಿದೆ .ಈ ಯೋಜನೆ ಇನ್ನು ಮೂರು ನಾಲ್ಕು ತಿಂಗಳ ಅವಧಿಯ ಒಳಗೆ ಜಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೊದಲ ಹಂತದ ಭಾಗವಾಗಿ ಒಟ್ಟು 11,000 ಹಾಟ್‌ಸ್ಪಾಟ್‌ಗಳಲ್ಲಿ 4,000 ಹಾಟ್‌ಸ್ಪಾಟ್‌ಗಳನ್ನು ಬಸ್ ನಿಲ್ದಾಣಗಳಲ್ಲಿ ಸ್ಥಾಪಿಸಲಾಗುವುದು ಮತ್ತು ಉಳಿದ 7,000 ಹಾಟ್‌ಸ್ಪಾಟ್‌ಗಳನ್ನು ದೆಹಲಿಯಾದ್ಯಂತದ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಿದರು.


ದೆಹಲಿ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಸಿಎಂ ಕೇಜ್ರಿವಾಲ್ ಈಗ ಜನಪ್ರಿಯ ಘೋಷಣೆಗಳ ಮೂಲಕ ಮತ್ತೊಮ್ಮೆ ಅಧಿಕಾರ ಹಿಡಿಯುವತ್ತ ಗಮನ ಹರಿಸಿದ್ದಾರೆ ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ಅಷ್ಟೇ ಮಹಿಳೆಯರಿಗೆ ಉಚಿತ ಮೆಟ್ರೋ ಸೇವೆ ಒದಗಿಸುವ ಪ್ರಸ್ತಾವವನ್ನು ಇಟ್ಟಿದ್ದರು. ಆದರೆ ಇದೆಲ್ಲವೂ ಅವರಿಗೆ ಚುನಾವಣೆಯಲ್ಲಿ ಎಷ್ಟು ಲಾಭವಾಗಲಿದೆ ಎನ್ನುವುದು ಪ್ರಶ್ನೆಯಾಗಿದೆ. ಈಗಾಗಲೇ ಆಮ್ ಆದ್ಮಿ ಪಕ್ಷವನ್ನು ಹಲವು ಹಿರಿಯ ನಾಯಕರು ತೊರೆದಿರುವುದರಿಂದ ಮುಂಬರುವ ಚುನಾವಣೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರಲಿದೆ ಎನ್ನಲಾಗಿದೆ.