ಅಸ್ಸಾಂ ಪ್ರವಾಹ: 17 ಜಿಲ್ಲೆಗಳ 700 ಗ್ರಾಮಗಳಲ್ಲಿ 4 ಲಕ್ಷ ಜನರ ಜೀವನ ಅಸ್ತವ್ಯಸ್ತ
ಗುವಾಹಟಿಯ ಮೂಲಕ ಹರಿಯುವ ಬ್ರಹ್ಮಪುತ್ರ ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಗುವಾಹಟಿ: ಅಸ್ಸಾಂನ ಪ್ರವಾಹ ಪರಿಸ್ಥಿತಿ 17 ಜಿಲ್ಲೆಗಳ 700 ಹಳ್ಳಿಗಳಲ್ಲಿ ನಾಲ್ಕು ಲಕ್ಷ ಜನರ ಮೇಲೆ ಪರಿಣಾಮ ಬೀರಿದೆ. ರಾಜ್ಯದಲ್ಲಿ ಭಾರಿ ಭೂಕುಸಿತ ಮುಂದುವರೆದಿದ್ದು, ಮೂರು ಜನರು ಸಾವನ್ನಪ್ಪಿದ್ದಾರೆ.
ಗುವಾಹಟಿಯ ಮೂಲಕ ಹರಿಯುವ ಬ್ರಹ್ಮಪುತ್ರ ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. "ನದಿ ನೀರು ನಿರ್ದಿಷ್ಟ ಮಟ್ಟವನ್ನು ತಲುಪಿದ್ದು, ಒಂದೆರಡು ದಿನಗಳಲ್ಲಿ ಅಪಾಯದ ಮಟ್ಟವನ್ನು ದಾಟಬಹುದು" ಎಂದು ಒಳನಾಡಿನ ಜಲಮಾರ್ಗ ಪ್ರಾಧಿಕಾರದ ವಿಭಾಗ ಅಧಿಕಾರಿ ವಿ ಗಾಂಧಿಯಾ ಹೇಳಿದರು. ಜೋರ್ಹತ್‌ನ ನಿಮತಿ ಘಾಟ್‌ನಲ್ಲಿ ನದಿ ಆಗಲೇ ಅಪಾಯದ ಮಟ್ಟ ದಾಟಿದೆ. ಇತರ ನದಿಗಳಾದ ಡಿಖೋವ್, ಧನ್ಸಿರಿ, ಜಿಯಾ ಭಾರಲಿ, ಪುತಿಮರಿ ಮತ್ತು ಬೆಕಿ ಕೂಡ ನೀರಿನ ಮಟ್ಟವು ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಜೋರ್ಹತ್, ದಾರಂಗ್, ಬಾರ್ಪೆಟಾ, ನಲ್ಬಾರಿ, ಮಜುಲಿ, ಚಿರಾಂಗ್, ದಿಬ್ರುಗರ್ಹ್ ಮತ್ತು ಗೋಲಘಾಟ್ ಪ್ರದೇಶಗಳು ಸೇರಿದಂತೆ 17 ಜಿಲ್ಲೆಗಳ 700 ಹಳ್ಳಿಗಳಲ್ಲಿ ಸುಮಾರು ನಾಲ್ಕು ಲಕ್ಷ ಜನರ ಮೇಲೆ ಇದರ ಪರಿಣಾಮ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುವಾಹಟಿ ಸಮೀಪದ ದೀಪರ್ ಬಿಲ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ನಂತರ, ಎರಡು ಮನೆಗಳು ನಾಶವಾಗಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಜುಲೈ 10 ರಂದು ಸಂಜೆ 5 ಗಂಟೆಯ ಹೊತ್ತಿಗೆ ಒಟ್ಟು 13,267.74 ಹೆಕ್ಟೇರ್ ಬೆಳೆ ಪ್ರದೇಶವು ಪ್ರವಾಹದಿಂದಾಗಿ ನಾಶಗೊಂಡಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ವರದಿಯನ್ನು ಉಲ್ಲೇಖಸಿ ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.
ರಾಜ್ಯದಲ್ಲಿ ಮಳೆ ನಿರಂತರವಾಗಿ ಹೆಚ್ಚಾಗಲಿದ್ದು ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮ್ಮ ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು 24x7 ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸಲು ಮತ್ತು ಆಸ್ಪತ್ರೆಗಳಲ್ಲಿನ ಔಷಧಿಗಳ ದಾಸ್ತಾನು ನವೀಕರಿಸಲು ಮತ್ತು ವೈದ್ಯರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಜಿಲ್ಲಾ ಆಯುಕ್ತರಿಗೆ ಸೂಚಿಸಿದರು.
ನಿರಂತರ ಮಳೆ ಮತ್ತು ಪ್ರವಾಹ ಪರಿಸ್ಥಿತಿಯು ರಾಜ್ಯಗಳಲ್ಲಿ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಮತ್ತು ಜಪಾನೀಸ್ ಎನ್ಸೆಫಾಲಿಟಿಸ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಯಿತು. ಈವರೆಗೆ ಕನಿಷ್ಠ 14 ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು 189 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಕ್ರಮ ಕೈಗೊಳ್ಳಲಾಗಿದೆ. ಬ್ರಹ್ಮಪುತ್ರದಿಂದ ಬರುವ ಪ್ರವಾಹದ ನೀರು ಕಾಜಿರಂಗ ರಾಷ್ಟ್ರೀಯ ಉದ್ಯಾನದ ಕೆಲವು ಭಾಗಗಳನ್ನು ಪ್ರವೇಶಿಸಿದ್ದು, ಪ್ರಾಣಿಗಳು ತಮ್ಮ ರಕ್ಷಣೆಗಾಗಿ ವಲಸೆ ಹೋಗುವಂತೆ ಮಾಡಿದೆ.