ಗುವಾಹಟಿ: ಭಾರಿ ಮಳೆಯಿಂದಾಗಿ ಅಸ್ಸಾಂನಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗಿದ್ದು, ರಾಜ್ಯದ ಎಂಟು ಜಿಲ್ಲೆಗಳಲ್ಲಿ 62000 ಕ್ಕೂ ಹೆಚ್ಚು ಜನರು ಪ್ರವಾಹ ಪೀಡಿತರಾಗಿದ್ದಾರೆ. ಜೋರ್ಹತ್‌ನ ನಿಮತಿ ಘಾಟ್‌ನಲ್ಲಿ ಬ್ರಹ್ಮಪುತ್ರ ನದಿ ಈಗಾಗಲೇ ಅಪಾಯದ ಮಟ್ಟ ತಲುಪಿದೆ ಎನ್ನಲಾಗಿದೆ.  


COMMERCIAL BREAK
SCROLL TO CONTINUE READING

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ವರದಿಯ ಪ್ರಕಾರ, ಧೇಮಾಜಿ, ಲಖಿಂಪುರ್, ಬಿಸ್ವಾನಾಥ್, ಜೋರ್ಹತ್ ಮತ್ತು ಗೋಲಘಾಟ್ ಜಿಲ್ಲೆಗಳು ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿವೆ. ರೊಂಗನೋಡಿ ಜಲ ವಿದ್ಯುತ್ ಯೋಜನೆಯ ಹೆಚ್ಚುವರಿ ನೀರನ್ನು ಲಖಿಂಪುರ ಜಿಲ್ಲೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರಿಂದ ಸ್ಥಳೀಯರ ಸಂಕಷ್ಟಗಳಿಗೆ ಕಾರಣವಾಗಿದೆ. ಗುವಾಹಟಿಯಲ್ಲಿ ನಿರಂತರ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಇದರಿಂದಾಗಿ ಓರ್ವ ಸಾವನ್ನಪ್ಪಿ ,ಒಬ್ಬನು ಗಾಯಗೊಂಡಿದ್ದಾನೆ ಎನ್ನಲಾಗಿದೆ. 


ಈಗ ಪ್ರವಾಹದ ಪರಿಸ್ಥಿತಿ ಬಗ್ಗೆ ಎಎಸ್‌ಡಿಎಂಎ ಅಧಿಕಾರಿಗಳು ಐಎಎನ್‌ಎಸ್‌ಗೆ ಪ್ರತಿಕ್ರಿಯಿಸಿ "ನಾವು ಏಪ್ರಿಲ್‌ನಿಂದ ನಗರದ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಭಾರಿ ಜಾಗೃತಿ ಮೂಡಿಸಿದ್ದೇವೆ. ಗೋರ್ಚುಕ್‌ನಲ್ಲಿಯೂ ಸಹ ನಾವು ಇಲ್ಲಿನ ಜನರನ್ನು ಇತರ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಕೇಳಿಕೊಂಡಿದ್ದೇವೆ. ಆದರೆ ಅವರು ನಮ್ಮ ಎಚ್ಚರಿಕೆಗಳಿಗೆ ಕಿವಿಗೊಡಲಿಲ್ಲ ಎಂದು ಹೇಳಿದರು.


ಕಳೆದ ವರ್ಷ ಪ್ರವಾಹದಿಂದ 10.99 ಲಕ್ಷಕ್ಕೂ ಹೆಚ್ಚು ಜನರು ಹಾನಿಗೊಳಗಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ತಿಳಿಸಿದೆ.