ನವದೆಹಲಿ:ಪೌರತ್ವ (ತಿದ್ದುಪಡಿ) ಕಾಯ್ದೆ-2019ನ್ನು ವಿರೋಧಿಸಿ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರೆದಿವೆ. ಆದಾಗ್ಯೂ ಕೂಡ ಗೃಹ ಸಚಿವ ಅಮಿತ್ ಶಾ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ಇಂದು ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, " ರಾಜಕೀಯವಾಗಿ ಈ ಕಾಯ್ದೆಗೆ ಎಷ್ಟೇ ವಿರೋಧ ಎದುರಾಗಲಿ, ಭಾರತೀಯ ಜನತಾ ಪಾರ್ಟಿ ಮಾತ್ರ ಸಹಾಯ ಕೋರಿ ಬಂದ ಎಲ್ಲ ಶರಣಾರ್ಥಿಗಳಿಗೆ ಭಾರತೀಯ ಪೌರತ್ವ ನೀಡಿಯೇ ತೀರಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಮಾತನಾಡಿರುವ ಅವರು "ಶರಣಾರ್ಥಿಗಳಿಗೆ ಭಾರತೀಯ ಪೌರತ್ವ ಸಿಗಲಿದ್ದು, ಅವರು ಭಾರತದ ನಾಗರಿಕರಾಗಲಿದ್ದು, ಈ ದೇಶದಲ್ಲಿ ಗೌರವದಿಂದ ಬಾಳಲಿದ್ದಾರೆ. ರಾಜಕೀಯವಾಗಿ ಯಾರು ಬೇಕಾದರೂ ಇದನ್ನು ವಿರೋಧಿಸಿ, ಭಾರತೀಯ ಜನತಾ ಪಕ್ಷ ಪಕ್ಷ ಮಾತ್ರ ಈ ಕಾಯ್ದೆ ಜಾರಿಗೆ ಕಟಿಬದ್ಧವಾಗಿದೆ" ಎಂದಿದ್ದಾರೆ.



ಈ ಕಾಯ್ದೆಯಲ್ಲಿ ಎಲ್ಲಿಯೂ ಕೂಡ ಯಾರ ಪೌರತ್ವವನ್ನೂ ಕೂಡ ಹಿಂಪಡೆಯುವ ಕುರಿತು ಪ್ರಸ್ತಾವನೆ ಇಲ್ಲ ಮತ್ತು ಇದರಲ್ಲಿ ಪೌರತ್ವ ದಯಪಾಲಿಸುವ ಪ್ರಸ್ತಾಪ ಮಾತ್ರ ಇದ್ದು, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತ ಪ್ರವೇಶಿಸಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಾಗುತ್ತಿದೆ ಎಂದು ಶಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.


ನಾನು ಈ ವಿಶ್ವಾಸ ನೀಡಲು ಬಯಸುವೆ
ಕಾಯ್ದೆಯ ಕುರಿತಂತೆ ಸ್ಪಷ್ಟತೆ ನೀಡಿರುವ ಶಾ " ಈಗಾಗಲೇ ಈ ದೇಶದ ನಾಗರಿಕರಾಗಿರುವವರು ಭಯಪಡುವ ಅಗತ್ಯವಿಲ್ಲ, ಈ ದೇಶದ ನಾಗರಿಕರಾಗಿರುವ ಓರ್ವ ಮುಸ್ಲಿಂ ವ್ಯಕ್ತಿಗೂ ಕೂಡ ಈ ಕಾಯ್ದೆಯಿಂದ ಅನ್ಯಾಯವಾಗುವುದಿಲ್ಲ ಎಂಬುದನ್ನು ನಾನು ವಿಶ್ವಾಸದಿಂದ ಹೇಳಬಯಸುತ್ತೇನೆ" ಎಂದಿದ್ದಾರೆ.


ಇದನ್ನು ವಿರೋಧಿಸಬೇಡಿ
" ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಭಾರತಕ್ಕೆ ಬರಲು ಇಚ್ಚಿಸುವ ಎಲ್ಲ ಮುಸ್ಲಿಮರಿಗೆ ಭಾರತ ಪೌರತ್ವ ನೀಡಲಿ ಎಂದು ಈ ಕಾಯ್ದೆಯನ್ನು ವಿರೋಧಿಸುತ್ತಿರುವವರು ಬಹಿರಂಗವಾಗಿ ಘೋಷಿಸಲಿ" ಎಂದು ಶಾ ಸವಾಲೆಸಗಿದ್ದಾರೆ. ಅಷ್ಟೇ ಅಲ್ಲ "ಒಂದು ವೇಳೆ ಇದು ನಿಮ್ಮಿಂದ ಸಾಧ್ಯವಾಗದೆ ಹೋದಲ್ಲಿ, ಕಾಯ್ದೆಯ ವಿರೋಧವನ್ನು ಕೈಬಿಡಿ" ಎಂದು ಕರೆ ನೀಡಿದ್ದಾರೆ .


ಯಾವುದೇ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲಾಗಿಲ್ಲ
ಈ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಶಾ, ಈ ದೇಶದಲ್ಲಿ ಸುಮಾರು 400ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿವೆ. ಅವುಗಳ ಪೈಕಿ ಕೇವಲ 5 ಯುನಿವರ್ಸಿಟಿಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಪಟ್ಟಿಯಲ್ಲಿ  ಜಾಮೀಯಾ ಮಿಲಿಯಾ, JNU, ಲಖನೌ ಹಾಗೂ AMU ಶಾಮೀಲಾಗಿವೆ. ಉಳಿದೆಲ್ಲೆಡೆ ವಿದ್ಯಾರ್ಥಿಗಳ ಮೇಲೆ ಕ್ರಮ ಜರುಗಿಸಲಾಗಿದೆ ಎಂಬ ಅಪಪ್ರಚಾರ ನಡೆಸಲಾಗಿದೆ. ಆದರೆ ವಾಸ್ತವದಲ್ಲಿ ಯಾವೊಬ್ಬ ವಿದ್ಯಾರ್ಥಿಯ ಮೇಲೂ ಕ್ರಮಕೈಗೊಳ್ಳಲಾಗಿಲ್ಲ. ಅಷ್ಟೇ ಅಲ್ಲ ಪೂರ್ವೋತ್ತರದ ರಾಜ್ಯಗಳಲ್ಲಿಯೂ ಕೂಡ  ಕಳೆದ ಮೂರು ದಿನಗಳಲ್ಲಿ ಒಂದೂ ಹಿಂಸಾಚಾರದ ಪ್ರಕರಣ ನಡೆದಿಲ್ಲ ಮತ್ತು ಅಲ್ಲಿ ಪರೀಸ್ಥಿತಿ ನಿಧಾನಕ್ಕೆ ಸಾಮಾನ್ಯದತ್ತ ಮರಳುತ್ತಿದೆ ಎಂದು ಶಾ ಮಾಹಿತಿ ನೀಡಿದ್ದಾರೆ.