ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಗೆ 18 ಸಾವು; ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಹಿಮಾಚಲ ಪ್ರದೇಶದಲ್ಲಿ ಭಾನುವಾರದಂದು ಸುರಿದ ಭಾರಿ ಮಳೆಯಿಂದಾದ ವಿವಿಧ ಘಟನೆಗಳಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.
ಶಿಮ್ಲಾ : ಹಿಮಾಚಲ ಪ್ರದೇಶದಲ್ಲಿ ಭಾನುವಾರದಂದು ಸುರಿದ ಭಾರಿ ಮಳೆಯಿಂದಾದ ವಿವಿಧ ಘಟನೆಗಳಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.
ಶಿಮ್ಲಾ ಮತ್ತು ಕುಲ್ಲು ಜಿಲ್ಲೆಗಳಲ್ಲಿನ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳು ಆಗಸ್ಟ್ 19 ರಂದು (ಸೋಮವಾರ) ಸ್ಥಗಿತಗೊಳ್ಳಲು ಆದೇಶಿಸಲಾಗಿದೆ. ಶಿಮ್ಲಾದಲ್ಲಿ ಎಂಟು ಜನರು, ಕುಲ್ಲು, ಸಿರ್ಮೌರ್, ಸೋಲನ್ ಮತ್ತು ಚಂಬಾದಲ್ಲಿ ತಲಾ ಇಬ್ಬರು ಮತ್ತು ಉನಾ ಮತ್ತು ಲಾಹೌಲ್-ಸ್ಪಿಟಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಮ್ಲಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ರಾಜ್ಯದಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು, ರಸ್ತೆಮಾರ್ಗಗಳನ್ನು ನಿರ್ಬಂಧಿಸಲಾಗಿದೆ ಮತ್ತು ಸಂಚಾರ ದಟ್ಟಣೆಗೆ ಅಧಿಕಗೊಂಡಿದೆ. ಕುಲ್ಲು ಜಿಲ್ಲೆಗಳಲ್ಲಿ 16 ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಇನ್ನೂ ಅನೇಕ ಮನೆಗಳು ಪ್ರವಾಹದಿಂದ ನಾಶವಾಗಿವೆ. ಜನರು ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಂತೆ ಕುಲುವಿನ ಸುಜ್ವಾಡ್ ನಲ್ಲಾದಲ್ಲಿ ನೀರು ಉಕ್ಕಿ ಹರಿಯಿದ್ದರಿಂದ ಇಬ್ಬರು ಕೊಚ್ಚಿ ಹೋದರು ಎನ್ನಲಾಗಿದೆ. ಕುಲ್ಲು ಜಿಲ್ಲೆಯಲ್ಲಿ ಕನಿಷ್ಠ 60 ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ 70 ವರ್ಷಗಳಲ್ಲಿ ಶಿಮ್ಲಾ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಮುಂದಿನ ಎರಡು ದಿನಗಳಲ್ಲಿ ಜಿಲ್ಲೆಯು ಗುಡುಗು ಮತ್ತು ಭಾರಿ ಮಳೆಗೆ ಸಾಕ್ಷಿಯಾಗಲಿದೆ ಎಂದು ತಿಳಿಸಿದೆ.
ಪ್ರವಾಹದಿಂದಾಗಿ ಕುಲ್ಲು ಪಟ್ಟಣದ ಬಳಿಯ ಬ್ಯಾಲಿ ಸೇತುವೆ ಕೊಚ್ಚಿ ಹೋಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಹೆಚ್ಚುವರಿ ನೀರನ್ನು ಸತ್ಲುಜ್ ಜಲ ವಿದ್ಯಾತ್ ನಿಗಮ್ ಲಿಮಿಟೆಡ್‌ನ (ಎಸ್‌ಜೆವಿಎನ್‌ಎಲ್) 1,500 ಮೆಗಾವ್ಯಾಟ್ ನಾಥಪಾ ಜಾಕ್ರಿ ಸ್ಥಾವರದಿಂದ ಬಿಡುಗಡೆ ಮಾಡಲಾಗಿದೆ - ಕಿನ್ನೌರ್ ಜಿಲ್ಲೆಯ ಭಾರತದ ಅತಿದೊಡ್ಡ ಜಲ ಯೋಜನೆ - ಇದು ಸತ್ಲುಜ್ ನದಿಯಲ್ಲಿ ಪ್ರವಾಹಕ್ಕೆ ಕಾರಣವಾಯಿತು ಎಂದು ಐಎಎನ್‌ಎಸ್ ವರದಿ ಮಾಡಿದೆ.
ಲಾಹೌಲ್ ಸ್ಪಿತಿ ಸಣ್ಣ ಪ್ರಮಾಣದಲ್ಲಿ ಹಿಮಪಾತವವಾಗಿದೆ, ಇನ್ನು ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಕಾಂಗ್ರಾ, ಕುಲ್ಲು ಮತ್ತು ಚಂಬಾ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಗರಿಷ್ಠ ಮಳೆಯಾಗಿದೆ. ಎಲ್ಲ ಪ್ರದೇಶಗಳ ಪರಿಸ್ಥಿತಿ ಹದಗೆಟ್ಟಿದೆ ಎಂದು ಶಿಮ್ಲಾದ ಹವಾಮಾನ ಕೇಂದ್ರ ತಿಳಿಸಿದೆ. ಒಟ್ಟಾರೆಯಾಗಿ ರಾಜ್ಯವು 102.5 ಮಿ.ಮೀ ಪಡೆದಿದೆ ಮತ್ತು ಇದು ಒಂದು ದಿನಕ್ಕೆ ಸಾಮಾನ್ಯಕ್ಕಿಂತ 1,065 ರಷ್ಟು ಹೆಚ್ಚಾಗಿದೆ ಎಂದು ಐಎಂಡಿ ತಿಳಿಸಿದೆ. ಬಿಲಾಸ್ಪುರ ಜಿಲ್ಲೆಯಲ್ಲಿ 252 ಮಿ.ಮೀ ಅತಿ ಹೆಚ್ಚು ಮಳೆಯಾಗಿದೆ, ಇದು ಸಾಮಾನ್ಯಕ್ಕಿಂತ ಶೇಕಡಾ 2,586 ರಷ್ಟು ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ, ಕುಲ್ಲು ಮತ್ತು ಶಿಮ್ಲಾ ಜಿಲ್ಲಾಡಳಿತವು ಸೋಮವಾರದವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದಾಗಿ ಘೋಷಿಸಿದೆ. 'ಭಾರಿ ಮಳೆ, ಅಡೆತಡೆಗಳು ಮತ್ತು ರಸ್ತೆಗಳಿಗೆ ಉಂಟಾದ ಹಾನಿಯನ್ನು ಗಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಶಿಮ್ಲಾ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಆಗಸ್ಟ್ 19 ರಂದು ಮುಚ್ಚಲು ಆದೇಶಿಸುವುದು ಅಗತ್ಯವಾಗಿದೆ" ಎಂದು ಶಿಮ್ಲಾ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಕಶ್ಯಪ್ ಆದೇಶ ಹೊರಡಿಸಿದ್ದಾರೆ.