ಅಯೋಧ್ಯೆ ವಿವಾದ: ಮಧ್ಯಸ್ಥಿಕೆ ಪ್ರಗತಿ ಸ್ಥಿತಿಗತಿ ವರದಿ ಸಲ್ಲಿಸಲು ಸುಪ್ರೀಂಕೋರ್ಟ್ ಸೂಚನೆ
ರಾಮಜನ್ಮ ಭೂಮಿ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯ ಪೀಠ, ಸಂಧಾನ ಪ್ರಗತಿ ಸ್ಥಿತಿಗತಿ ವರದಿಯನ್ನು ಜುಲೈ 18ರೊಳಗೆ ಸಲ್ಲಿಸುವಂತೆ ಸೂಚನೆ ನೀಡಿದೆ.
ನವದೆಹಲಿ: ಅಯೋಧ್ಯೆ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದ ಸಂಧಾನ ಪ್ರಗತಿ ಸ್ಥಿತಿಗತಿಯ ವರದಿಯನ್ನು ಸಲ್ಲಿಸುವಂತೆ ಮಧ್ಯಸ್ಥಿಕೆ ಸಮಿತಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಜುಲೈ 25ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಗುರುವಾರ ರಾಮಜನ್ಮ ಭೂಮಿ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯ ಪೀಠ, ಸಂಧಾನ ಪ್ರಗತಿ ಸ್ಥಿತಿಗತಿ ವರದಿಯನ್ನು ಜುಲೈ 18ರೊಳಗೆ ಸಲ್ಲಿಸುವಂತೆ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಗೆ ಸೂಚನೆ ನೀಡಿದೆ.
ಒಂದು ವೇಳೆ ಪ್ರಸ್ತುತ ಸಲ್ಲಿಸಲಾಗಿರುವ ಮಧ್ಯಸ್ಥಿಕೆ ಪ್ರಕ್ರಿಯೆ ವರದಿ ಮೇರೆಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಭಾವಿಸಿದರೆ ಮುಖ್ಯ ಪ್ರಕರಣದ ವಿಚಾರಣೆಯನ್ನು ದಿನನಿತ್ಯದ ಆಧಾರದ ಮೇಲೆ ಜುಲೈ 25 ರಿಂದ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.