ನಿಗದಿತ ದಿನಾಂಕದಲ್ಲೇ ಪ್ರಾರಂಭಗೊಳ್ಳಲಿದೆ `ಆಯುಷ್ಮಾನ್ ಭಾರತ್ ಯೋಜನೆ`
ವಿಶ್ವದ ಅತಿದೊಡ್ಡ ಸರ್ಕಾರಿ ಆರೋಗ್ಯ ವಿಮೆಯ ಯೋಜನೆಯನ್ನು ಕಾರ್ಯಗತಗೊಳಿಸಲು ಸೆಪ್ಟೆಂಬರ್ 25 ರ ದಿನಾಂಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿ ಪಡಿಸಿದ್ದಾರೆ.
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಆಯುಷ್ಮಾನ್ ಭಾರತ್ ಯೋಜನೆ ಬಿಡುಗಡೆಗೆ ದಿನಾಂಕವನ್ನು ನಿಗದಿಪಡಿಸಿದ್ದಾರೆ. ಯೋಜನೆಯ ಬಿಡುಗಡೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿರುವುದರಿಂದ ಆರೋಗ್ಯ ಸಚಿವಾಲಯದ ಉದ್ಯೋಗಿಗಳ ರಜಾದಿನಗಳನ್ನು ರದ್ದುಗೊಳಿಸಲಾಗಿದೆ. ವಿಶ್ವದ ಅತಿದೊಡ್ಡ ಸರ್ಕಾರಿ ಆರೋಗ್ಯ ವಿಮೆಯ ಯೋಜನೆಯನ್ನು ಕಾರ್ಯಗತಗೊಳಿಸಲು ಸೆಪ್ಟೆಂಬರ್ 25 ರ ದಿನಾಂಕವನ್ನು ಮೋದಿ ಅವರು ನಿಗದಿಪಡಿಸಿದ್ದಾರೆ. ಪ್ರಧಾನಿ ಮೋದಿ ಆಗಸ್ಟ್ 29 ರಂದು ಈ ಬಹುನಿರೀಕ್ಷಿತ ಯೋಜನೆಗಾಗಿ ವಿಮರ್ಶೆ ಸಭೆ ನಡೆಸಲಿದ್ದಾರೆ.
ಮೊದಲ ಬಾರಿಗೆ, ಆಯುಷ್ಮಾನ್ ಭಾರತ್ ಯೋಜನೆ ಪ್ರಧಾನಿ ಪ್ರಗತಿ ಸಭೆಯ ಭಾಗವಾಗಿದೆ ಎಂದು ಹೇಳಲಾಗಿದೆ. ಯೋಜನೆ ಪ್ರಾರಂಭಿಸುವುದರಲ್ಲಿ ವಿಳಂಬವಾಗದಂತೆ ಆರೋಗ್ಯ ಸಚಿವಾಲಯ ಈ ಯೋಜನೆಯಲ್ಲಿ 15 ಜಂಟಿ ಕಾರ್ಯದರ್ಶಿಗಳು ಮತ್ತು ಹೆಚ್ಚುವರಿ ಕಾರ್ಯದರ್ಶಿಗಳನ್ನು ಕಾರ್ಯಗತಗೊಳಿಸಿದೆ. ಇಲ್ಲಿಯವರೆಗೆ, ನ್ಯಾಷನಲ್ ಹೆಲ್ತ್ ಪ್ರೊಟೆಕ್ಷನ್ ಮಿಶನ್ (NHPM) ಗೆ ಸಂಬಂಧಿಸಿದ ಅಧಿಕಾರಿಗಳು ಈ ಯೋಜನೆಯಲ್ಲಿ ಪಾಲ್ಗೊಂಡಿದ್ದರು.
ಆಯುಷ್ಮಾನ್ ಭಾರತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಇಂದೂ ಭೂಷಣ್ ಯೋಜನೆಯನ್ನು ನಿಗದಿತ ದಿನಾಂಕದಲ್ಲಿ ಪ್ರಾರಂಭಿಸುವ ಸಲುವಾಗಿ ಆರೋಗ್ಯ ಸಚಿವಾಲಯದ ಉದ್ಯೋಗಿಗಳ ರಜಾದಿನಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದರು. ಇದಲ್ಲದೆ, ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ರಕ್ಷಾ ಬಂಧನ್ ದಿನದಲ್ಲಿ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಎಲ್ಲಾ ಅಧಿಕಾರಿಗಳಿಗೆ ಸೆಪ್ಟೆಂಬರ್ 25 ರವರೆಗೆ ರಜೆ ಇರುವುದಿಲ್ಲ ಎಂದು ಸೂಚಿಸಲಾಗಿದೆ. ಆದಾಗ್ಯೂ, ಈ ಬಗ್ಗೆ ಲಿಖಿತ ಆದೇಶವನ್ನು ನೀಡಲಾಗಿಲ್ಲ.
'ಆಯುಷ್ಮಾನ್ ಭಾರತ' ಯೋಜನೆ ಘೋಷಿಸಿದ ಪ್ರಧಾನಿ ಮೋದಿ
ಆರೋಗ್ಯ ಸಚಿವಾಲಯವು ಈಗ ದೆಹಲಿಯಲ್ಲಿ ಕುಳಿತು ಮಾತ್ರ ಕೆಲಸ ಮಾಡುವುದಿಲ್ಲ ಎಂದು ಹೇಳಿದೆ, ಏಕೆಂದರೆ ಬಹಳಷ್ಟು ಕೆಲಸ ಉಳಿದಿದೆ. ಆದ್ದರಿಂದ, ಪ್ರತಿ ಅಧಿಕಾರಿಗೂ ಪ್ರತ್ಯೇಕ ರಾಜ್ಯದ ಜವಾಬ್ದಾರಿಯನ್ನು ನೀಡಲಾಗಿದೆ. ಸೆಪ್ಟಂಬರ್ ಮೊದಲ ವಾರ ಮತ್ತು ಸೆಪ್ಟೆಂಬರ್ 15 ರೊಳಗೆ ಎಲ್ಲಾ ಕೆಲಸಗಳು ಪೂರ್ಣಗೊಳ್ಳಬೇಕು ಎಂದು ಸೂಚಿಸಲಾಗಿದೆ.
ದೇಶಾದ್ಯಂತ ಈ ಯೋಜನೆ ಅನ್ವಯವಾಗಲಿದ್ದು, 11 ರಾಜ್ಯಗಳ 70-80 ಜಿಲ್ಲೆಗಳಲ್ಲಿ ಯೋಜನೆಯ ಸೇವೆಗಳು ಲಭ್ಯವಾಗಲಿವೆ. ಯೋಜನೆಯಲ್ಲಿ 100 ಆಸ್ಪತ್ರೆಗಳಿದ್ದು, ಇದರಲ್ಲಿ ಬಹುತೇಕ ಆಸ್ಪತ್ರೆಗಳು ಸರ್ಕಾರಿ ವಲಯದ್ದಾಗಿರುತ್ತವೆ. ಈ ಯೋಜನೆಯಡಿಯಲ್ಲಿ ಯಾವುದೇ ಸರ್ಕಾರಿ ಅಥವಾ ಸರ್ಕಾರದಿಂದ ನೊಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ರೂ. 5 ಲಕ್ಷದವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಸ್ವಾಸ್ಥ್ಯ ವಿಮೆ ಯೋಜನೆ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆ ಯೋಜನೆಗಳನ್ನೂ ವಿಲೀನಗೊಳಿಸಲಾಗುತ್ತದೆ.