ಸುಪ್ರೀಂ ಕೋರ್ಟಿನ ಮಹಿಳೆಯರ ಪರ ತೀರ್ಪಿಗೆ ಅಯ್ಯಪ್ಪ ದೇಗುಲ ಆಕ್ಷೇಪ: ಮೇಲ್ಮನವಿಗೆ ನಿರ್ಧಾರ
ದೇಶಾದ್ಯಂತ ಪ್ರಶಂಸೆಗೆ ಒಳಗಾಗುತ್ತಿರುವ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಅಯ್ಯಪ್ಪ ಸ್ವಾಮಿ ದೇವಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ನವದೆಹಲಿ: ಎಲ್ಲಾ ವಯೋಮಾನದ ಮಹಿಳೆಯರಿಗೂ ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅನುಮತಿ ಕಲ್ಪಿಸುವಂತಹ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿಗೆ ಟ್ರಾವಂಕೂರು ದೇವಾಲಯ ಮಂಡಳಿಯು ಅಸಮಾಧಾನ ವ್ಯಕ್ತಪಡಿಸಿದೆ. ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಮಂಡಳಿ ಸದಸ್ಯ ರಾಹುಲ್ಈಶ್ವರ್ ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಮಿಸಿದ್ದಾರೆ ಎನ್ನಲಾಗಿದೆ.
ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವುದನ್ನು ವಿರೋಧಿಸಿ 2006ರ ಜನವರಿಯಲ್ಲಿ ಯಂಗ್ ಲಾಯರ್ಸ್ ಅಸೋಸಿಯೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧಿಸಿದಂತೆ ವಿಚಾರಣೆ ನಡೆಸಲು 2017ರ ಅಕ್ಟೋಬರ್ 13ರಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ರಚಿಸಿತ್ತು. ತ್ವರಿತ ವಿಚಾರಣೆ ನಡೆಸಿದ ಸಂವಿಧಾನಿಕ ಪೀಠ ಆಗಸ್ಟ್ 1ರಂದು ತೀರ್ಪು ಅನ್ನು ಕಾಯ್ದಿರಿಸಿತ್ತು. ಇಂದು (ಸೆ. 28) ಆ ತೀರ್ಪು ಅನ್ನು ಪ್ರಕಟಿಸಿ ಎಲ್ಲಾ ವಯೋಮಾನದ ಮಹಿಳೆಯರಿಗೂ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕೊಡಬೇಕು. ಧಾರ್ಮಿಕ ಆಚರಣೆ ಹೆಸರಿನಲ್ಲಿ ಲಿಂಗತಾರತಮ್ಯ ಮಾಡಬಾರದೆಂದು ಹೇಳಿದೆ. ಜೊತೆಗೆ ಪುರುಷರಿಗಿಂತ ಮಹಿಳೆಯರೇನೂ ಕಡಿಮೆ ಅಲ್ಲ ಎಂದೂ ಹೇಳಿದೆ.
ಅರ್ಜಿ ವಿಚಾರಣೆ ಸಂದರ್ಭದಲ್ಲೂ ಮಹಿಳೆಯರ ನಿಷೇಧ ಕ್ರಮವನ್ನು ಪ್ರಶ್ನಿಸಿದ್ದ ಸಂವಿಧಾನ ಪೀಠ, ಮಹಿಳೆಯರ ಧಾರ್ವಿುಕ ಹಕ್ಕನ್ನು ಕಸಿದುಕೊಳ್ಳುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿತ್ತು. ಆದರೀಗ ದೇಶಾದ್ಯಂತ ಪ್ರಶಂಸೆಗೆ ಒಳಗಾಗುತ್ತಿರುವ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಅಯ್ಯಪ್ಪ ಸ್ವಾಮಿ ದೇವಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಸುಪ್ರೀಂ ಕೋರ್ಟಿನಲ್ಲಿ ತೀರ್ಪಿನ ಮರುಪರಿಶೀಲನೆಗೆ ಮೇಲ್ಮನವಿ ಸಲ್ಲಿಸಲು ಮುಂದಾಗುತ್ತಿದೆ.