ರಾಂಪುರ: ಇಲ್ಲಿನ ಮೌಲಾನಾ ಅಲಿ ಜೌಹರ್ ವಿಶ್ವವಿದ್ಯಾಲಯದಲ್ಲಿ ಪೊಲೀಸರು ನಡೆಸಿದ ದಾಳಿಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಪುತ್ರ ಮತ್ತು ಶಾಸಕ ಅಬ್ದುಲ್ಲಾ ಅಜಮ್ ಖಾನ್ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಅಬ್ದುಲ್ಲಾ ಅವರ ತಂದೆ ಅಜಮ್ ಖಾನ್ ನೇತೃತ್ವದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ಆವರಣದಲ್ಲಿ ಉತ್ತರ ಪ್ರದೇಶ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದರು. ಈ ವಿಶ್ವವಿದ್ಯಾಲಯದಲ್ಲಿ  ಅಬ್ದುಲ್ಲಾ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. 


ದಾಳಿ ವೇಳೆ 2,000 ಕದ್ದ, ಅಪರೂಪದ ಮತ್ತು ಮೌಲ್ಯಯುತವಾದ ಪುಸ್ತಕಗಳನ್ನು ಗ್ರಂಥಾಲಯದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಶ್ವಪ್ರಸಿದ್ಧ ರಾಜಾ ಗ್ರಂಥಾಲಯ ಮತ್ತು ಮದರ್ಸಾ ಅಲಿಯಾದಿಂದ ಪುಸ್ತಕಗಳು ಕಾಣೆಯಾದ ಬಗ್ಗೆ ಜೂನ್ 16 ರಂದು ಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ.


ಮತ್ತೊಂದು ಬೆಳವಣಿಗೆಯಲ್ಲಿ, ಪಾಸ್ಪೋರ್ಟ್ ಪಡೆಯಲು ದಾಖಲೆಗಳನ್ನು ನಕಲಿ ಮಾಡಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ಶಾಸಕರ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ. ಅವರು ಸಲ್ಲಿಸಿದ ವಯಸ್ಸಿನ ಪುರಾವೆಗಳಲ್ಲಿನ ವ್ಯತ್ಯಾಸಗಳನ್ನು ಉಲ್ಲೇಖಿಸಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.


ಭಾರತೀಯ ಜನತಾ ಪಕ್ಷದ ಮುಖಂಡ ಆಕಾಶ್ ಸಕ್ಸೇನಾ ಅವರು ದೂರು ದಾಖಲಿಸಿದ್ದು, ಸುಳ್ಳು ದಾಖಲೆಗಳ ಆಧಾರದ ಮೇಲೆ ಅಬ್ದುಲ್ಲಾ ಖಾನ್ ಪಾಸ್‌ಪೋರ್ಟ್ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಎಸ್‌ಪಿ ಮುಖಂಡರು ಶಿಕ್ಷಣ ಪ್ರಮಾಣಪತ್ರಗಳು ಮತ್ತು ಪಾಸ್‌ಪೋರ್ಟ್ ದಾಖಲೆಗಳಲ್ಲಿ ಬೇರೆ ಬೇರೆ ಜನ್ಮ ದಿನಾಂಕಗಳನ್ನು ಉಲ್ಲೇಖಿಸಿದ್ದಾರೆ ಎಂದು ಸಕ್ಸೇನಾ ಆರೋಪಿಸಿದ್ದಾರೆ.


ಪೊಲೀಸ್ ಮೂಲಗಳ ಪ್ರಕಾರ, ಅಬ್ದುಲ್ಲಾ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 467, 468, 471 ಮತ್ತು ಪಾಸ್ಪೋರ್ಟ್ ಕಾಯ್ದೆಯ ಸೆಕ್ಷನ್ 12 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.