ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ನೀಡದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ರಾಮದೇವ್ ಆಕ್ರೋಶ
ಯೋಗಗುರು ಬಾಬಾ ರಾಮದೇವ್ ಕೇಂದ್ರ ಸರ್ಕಾರವು ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಯೋಗಗುರು ಬಾಬಾ ರಾಮದೇವ್ ಕೇಂದ್ರ ಸರ್ಕಾರವು ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಸುದ್ದಿಗಾರೊಂದಿಗೆ ಮಾತನಾಡಿದ ರಾಮದೇವ್ ಕಳೆದ 70 ವರ್ಷಗಳಿಂದಲೂ ಯಾವುದೇ ಸನ್ಯಾಸಿಗಳಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿಲ್ಲ ಎಂದು ಸರ್ಕಾರದ ವಿರುದ್ದ ಕಿಡಿ ಕಾರಿದರು.
"ಇದು ನಿಜಕ್ಕೂ ದುರಾದೃಷ್ಟಕರ ಕಳೆದ 70 ವರ್ಷಗಳಿಂದ ಯಾವುದೇ ಸನ್ಯಾಸಿಗೆ ಭಾರತ ರತ್ನ ನೀಡಿಲ್ಲ ಅದು ಮಹರ್ಷಿ ದಯಾನಂದ ಸರಸ್ವತಿಯಾಗಿರಬಹುದು,ಸ್ವಾಮಿ ವಿವೇಕಾನಂದರಾಗಿರಬಹುದು ಅಥವಾ ಇತ್ತೀಚಿಗೆ ನಿಧನರಾದ ಶಿವಕುಮಾರ್ ಸ್ವಾಮಿಜಿಗಳಾಗಿರಬಹುದು,ಆದ್ದರಿಂದ ನಾನು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಿಷ್ಟೇ ಮುಂದಿನ ವರ್ಷ ಈ ಪ್ರತಿಷ್ಠಿತ ಪ್ರಶಸ್ತಿಗೆ ಸನ್ಯಾಸಿಯೋಬ್ಬರನ್ನು ಪರಿಗಣಿಸಬೇಕು" ಎಂದು ರಾಮದೇವ್ ತಿಳಿಸಿದರು.
ಸಿದ್ದಗಂಗಾ ಶ್ರೀಗಳಿಗೆ ಈ ಬಾರಿ ಕೇಂದ್ರ ಸರ್ಕಾರ ಭಾರತರತ್ನ ನೀಡುತ್ತದೆ ಎಂದು ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು, ಆದರೆ ಈ ನಿರೀಕ್ಷೆಗೆ ಸರ್ಕಾರ ಎಳ್ಳು ನೀರು ಬಿಟ್ಟಿತ್ತು , ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಬಹುತೇಕರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಈ ಜನರ ಧ್ವನಿಗೆ ಬೆಂಬಲ ವ್ಯಕ್ತಪಡಿಸಿರುವ ಯೋಗಗುರು ರಾಮದೇವ್ ಸರ್ಕಾರದ ನಡೆ ವಿರುದ್ದ ಕಿಡಿ ಕಾರಿದರು.