ಕಾನ್ಪುರ: ದೇಶದ ಮೊಟ್ಟ ಮೊದಲ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್'ನ ಪ್ರಯಾಣಿಕರ ಆರೋಗ್ಯದ ಜೊತೆ ರೈಲ್ವೆ ಇಲಾಖೆ ಆಟವಾಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. 


COMMERCIAL BREAK
SCROLL TO CONTINUE READING

ಭಾನುವಾರ ವಾರಣಾಸಿಯಿಂದ ದೆಹಲಿಗೆ ಆಗಮಿಸುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕರಿಗೆ ಕಾನ್ಪುರದಲ್ಲಿ ಹಳಸಿದ ಅನ್ನವನ್ನು ನೀಡಲಾಗಿದೆ. ಇದನ್ನು ಕೇಂದ್ರ ಮಂತ್ರಿ ಸಾದ್ವಿ ನಿರಂಜನ್ ಜ್ಯೋತಿ ಅವರೇ ಸಾಕ್ಷಿಯಾಗಿದ್ದಾರೆ. ಕೂಡಲೇ ಈ ವಿಚಾರವನ್ನು ಕೇಂದ್ರ ರೈಲ್ವೆ ಸಚಿವರಿಗೆ ತಲುಪಿಸಲಾಗಿದ್ದು, ಐಆರ್ಸಿಟಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಸಿಂಗ್ ಅವರಿಗೆ ಘಟನೆ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. 


ಘಟನೆ ಸಂಬಂಧ ವಿಶೇಷ ತನಿಖಾ ತಂಡವು ಇಂದು ಕಾನ್ಪುರ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದು, ಆರೋಪ ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ. 


ವಿವಿಐಪಿ ರೈಲಾದ ವಂದೇ ಭಾರತ್ ಎಕ್ಸ್ ಪ್ರೆಸ್'ನಲ್ಲಿ ಪ್ರಯಾಣಿಕರಿಗಾಗಿ ಫೈ ಸ್ಟಾರ್ ಹೋಟೆಲ್ ಲ್ಯಾಂಡ್ ಮಾರ್ಕ್ ನಲ್ಲಿ ತಯಾರಿಸಲಾದ ಆಹಾರವನ್ನು ಸರ್ವ್ ಮಾಡಲಾಗುತ್ತದೆ. ಭಾನುವಾರ ವಾರಣಾಸಿಯಿಂದ ದೆಹಲಿಗೆ ಹೋಗುವ ಮಾರ್ಗ ಮಧ್ಯೆ ಕಾನ್ಪುರದಲ್ಲಿ ರೈಲು ನಿಲುಗಡೆಯಾದ ಕಾರಣ ಅಲ್ಲಿಂದಲೇ ಆಹಾರ ಸರಬರಾಜು ಮಾಡಲಾಗಿತ್ತು. ಇದೇ ರೈಲಿನಲ್ಲಿ ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ ಸಹ ಪ್ರಯಾಣಿಸುತ್ತಿದ್ದರು. ರೈಲಿನಲ್ಲಿ ನೀಡಲಾದ ಕಳಪೆ ಗುಣಮಟ್ಟದ ಆಹಾರ ಹಿಡಿದು ಜ್ಯೋತಿ ಅವರ ಬಳಿ ಬಂದು ಆರೋಪಿಸಿದ ಕೂಡಲೇ ಈ ವಿಚಾರವನ್ನು ಕೇಂದ್ರ ರೈಲ್ವೆ ಸಚಿವರಿಗೆ ನಿರಂಜನ್ ಜ್ಯೋತಿ ಮುಟ್ಟಿಸಿದ್ದಾರೆ.


ಸದ್ಯ ಘಟನೆ ಬಗ್ಗೆ ತನಿಖೆ ಆರಂಭವಾಗಿದ್ದು,  ಐಆರ್ಸಿಟಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಸಿಂಗ್ ದೆಹಲಿಯಿಂದ ಕಾನ್ಪುರಕ್ಕೆ ತೆರಳಿದ್ದಾರೆ.