Coronavirus ಸಂಕಷ್ಟದ ನಡುವೆ ಸರ್ಕಾರಿ ನೌಕರರಿಗೊಂದು ಕಹಿ ಸುದ್ದಿ
ಇದಕ್ಕೆ ಸಂಬಂಧಿಸಿದಂತೆ ಗುರುವಾರ ಆದೇಶ ಹೊರಡಿಸಿರುವ ಕೇಂದ್ರ ವಿತ್ತ ಸಚಿವಾಲಯ, ಜುಲೈ 2021ರವರೆಗೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಗೆ ತಡೆ ನೀಡಲಾಗಿದೆ ಎಂದು ಹೇಳಿದೆ.
ನವದೆಹಲಿ:ದೇಶಾದ್ಯಂತ ಕೊರೊನಾ ಸಂಕಷ್ಟದ ಹಿನ್ನೆಲೆ ಅರ್ಥವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗುರುವಾರ ಗಂಭೀರ ನಿರ್ಧಾರವೊಂದನ್ನು ಪ್ರಕಟಿಸಿದ್ದು, ಜುಲೈ 1, 2021ರವರೆಗೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ತಡೆಹಿಡಿಯಲಾಗುವುದು ಎಂದು ಹೇಳಿದೆ.
ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶಗ ಪ್ರಕಾರ ಕೊರೊನಾ ವೈರಸ್ ಸಂಕಷ್ಟದ ಹಿನ್ನೆಲೆ 1 ಜನವರಿ 202೦ರ ಬಳಿಕ ಕೇಂದ್ರ ಸರ್ಕಾರಿ ನೌಕರರು ಹಾಗೂ ಪೆನ್ಷನ್ ಧಾರಕರಿಗೆ ಸಿಗುತ್ತಿದ್ದ ತುಟ್ಟಿಭತ್ಯೆಯನ್ನು ನೀಡಲಾಗುವುದಿಲ್ಲ. ಅಷ್ಟೇ ಅಲ್ಲ 1 ಜುಲೈ 2020ರಿಂದ ಸಿಗುವ ಹೆಚ್ಚುವರಿ DA ಅನ್ನೂ ಕೂಡ ನೀಡಲಾಗುವುದಿಲ್ಲ ಎಂದು ಹೇಳಲಾಗಿದೆ. ಈ ಬಳಿಕ ಮುಂದಿನ DA ಯಾವಾಗ ಸಿಗಲಿದೆ ಎಂಬುದು 1 ಜುಲೈ 2021ರ ಬಳಿಕ ಮಾತ್ರ ಸ್ಪಷ್ಟವಾಗಲಿದೆ. ಸರ್ಕಾರದ ಈ ಆದೇಶ ಕೇಂದ್ರ ಸರ್ಕಾರಿ ನೌಕರರು ಹಾಗೂ ಕೇಂದ್ರ ಸರ್ಕಾರದಿಂದ ಪಿಂಚಣಿ ಪಡೆಯುವ ನೌಕರರಿಗೆ ಅನ್ವಯಿಸಲಿದೆ.
ಕೊರೊನಾ ಸಂಕಷ್ಟದ ಹಿನ್ನೆಲೆ ಕೇಂದ್ರ ಸರ್ಕಾರ ಈಗಾಗಲೇ ತನ್ನ ಹಲವಾರು ಯೋಜನೆಗಳಲ್ಲಿನ ಆರ್ಥಿಕ ಕೊಡುಗೆಗಳಿಗೆ ಕತ್ತರಿ ಹಾಕುತ್ತಿದೆ. ಇದಕ್ಕೂ ಮೊದಲು ಗುರುವಾರ ಕೇಂದ್ರ ರಕ್ಷಣಾ ಇಲಾಖೆಯ ಬಜೆಟ್ ನಲ್ಲಿಯೂ ಕೂಡ ಕಡಿತಗೊಳಿಸಲಾಗುವುದು ಎಂಬ ಮಾತುಗಳು ಕೇಳಿಬಂದಿದ್ದವು. ಇದರಲ್ಲಿ ಹೊಸ ಯೋಜನೆಗಳಿಗೆ ಹಣಕಾಸಿನ ಹೂಡಿಕೆಯನ್ನು ತಡೆಹಿಡಿಯಲಾಗುವುದು ಎನ್ನಲಾಗಿತ್ತು. ಸರ್ಕಾರದ ಈ ನಿರ್ಣಯ ರಾಫೆಲ್ ವಿಮಾನ, ಎಸ್-400 ಮಿಸೈಲ್ ಸಿಸ್ಟಮ್ ಖರೀದಿಯ ಮೇಲೂ ಕೂಡ ಪರಿಣಾಮ ಉಂಟುಮಾಡಲಿದೆ ಎನ್ನಲಾಗಿದೆ.
ಇದಕ್ಕೂ ಮೊದಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ, ಸಂಸದರು, ಸಚಿವರು, ರಾಷ್ಟ್ರಪತಿ, ಉಪರಾಷ್ಟ್ರ ಪತಿಗಳ ವೇತನದಲ್ಲಿ ಶೇ.30 ಕಡಿತಗೊಳಿಸುವುದಾಗಿ ಘೋಷಿಸಿತ್ತು. ಜೊತೆಗೆ PMLAD ನಿಧಿಯನ್ನೂ ಕೂಡ ಎರಡು ವರ್ಷಗಳ ಕಾಲ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿತ್ತು.
ಕೊರೊನಾ ವೈರಸ್ ಸಂಕಷ್ಟದ ಹಿನ್ನೆಲೆ ಸದ್ಯ ದೇಶಾದ್ಯಂತ ಕಳೆದ 40 ದಿನಗಳಿಂದ ಲಾಕ್ ಡೌನ್ ಘೋಷಿಸಲಾಗಿದೆ. ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಪ್ರಭಾವಿತಗೊಂಡಿದೆ. ದೇಶಾದ್ಯಂತ ಎಲ್ಲ ವ್ಯವಹಾರಗಳು ಬಂದ್ ಆದ ಕಾರಣ ಅದರ ನೇರ ಪರಿಣಾಮ GDP ಹಾಗೂ ಕಂದಾಯದ ಮೇಲೆ ಉಂಟಾಗುತ್ತಿದೆ.