ಬಾಲಾಸಾಹೇಬ್ ಠಾಕ್ರೆ, ಅಟಲ್ ಜೀ ಕನಸು ಇಂದು ಪೂರ್ಣಗೊಂಡಿದೆ: ಉದ್ಧವ್ ಠಾಕ್ರೆ
ಇಂದು ನಮ್ಮ ದೇಶವು ಸಂಪೂರ್ಣವಾಗಿ ಸ್ವತಂತ್ರವಾಗಿದೆ. ಅದಕ್ಕಾಗಿ ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸುತ್ತೇನೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದರು.
ನವದೆಹಲಿ: ರಾಜ್ಯಸಭೆಯಲ್ಲಿ ಸಂವಿಧಾನದ 370 ನೇ ವಿಧಿ ಮತ್ತು 35 ಎ ರದ್ದು ಮಾಡುವುದನ್ನು ಶಿವಸೇನೆ ಸ್ವಾಗತಿಸಿದೆ. ಇಂದು ನಮ್ಮ ದೇಶವು ಸಂಪೂರ್ಣವಾಗಿ ಸ್ವತಂತ್ರವಾಗಿದೆ. ಅದಕ್ಕಾಗಿ ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸುತ್ತೇನೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದರು.
ಬಾಲಾ ಸಾಹೇಬ್ ಠಾಕ್ರೆ ಮತ್ತು ಅಟಲ್ ಬಿಹಾರಿ ವಾಜಪೇಯಿ ಕಂಡಿದ್ದ ಕನಸು ಇಂದು ಪೂರ್ಣಗೊಂಡಿದೆ. ದೇಶದ ಜನತೆ ಒಟ್ಟಾಗಿ ಬದುಕಲು ಈ ನಿರ್ಧಾರ ಅಗತ್ಯ ಎಂದು ಪ್ರತಿಭಟಿಸುತ್ತಿರುವವರಿಗೆ ಹೇಳಲು ಬಯಸುತ್ತೇನೆ. ಹಾಗಾಗಿ ಅದನ್ನು ವಿರೋಧಿಸಬಾರದು ಎಂದು ಉದ್ಧವ್ ಠಾಕ್ರೆ ಹೇಳಿದರು. ಬಾಲಾಸಾಹೇಬ್ ಇಂದು ಇದ್ದಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು. ಇಂದು ಅವರ ದೊಡ್ಡ ಕನಸೊಂದು ಈಡೇರಿದೆ ಎಂದು ಉದ್ಧವ್ ಠಾಕ್ರೆ ಹರ್ಷ ವ್ಯಕ್ತಪಡಿಸಿದರು.
ವಾಸ್ತವವಾಗಿ, ಕೇಂದ್ರ ಸರ್ಕಾರವು ಸೋಮವಾರ ರಾಜ್ಯಸಭೆಯಲ್ಲಿ ಸಂವಿಧಾನದ 370 ನೇ ವಿಧಿಯನ್ನು ತೆಗೆದುಹಾಕುವ ಪ್ರಸ್ತಾಪವನ್ನು ಮಂಡಿಸಿತು. ಸಂವಿಧಾನದ ಕಲಂ 370 ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುತ್ತದೆ. ಪ್ರಸ್ತಾವನೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುವುದು. ಇದರಲ್ಲಿ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯನ್ನು ಒಳಗೊಂಡ ಕೇಂದ್ರಾಡಳಿತ ಪ್ರದೇಶವಾಗಿ ಕಾರ್ಯನಿರ್ವಹಿಸಲಿದೆ. ಲಡಾಖ್ ಮತ್ತೊಂದು ಕೇಂದ್ರಾಡಳಿತ ಪ್ರದೇಶವಾಗಲಿದೆ. ಆದರೆ ಲಡಾಖ್‌ನಲ್ಲಿ ಯಾವುದೇ ಅಸೆಂಬ್ಲಿ ಇರುವುದಿಲ್ಲ ಎಂದು ಶಾ ಹೇಳಿದರು.
ಗಡಿಯಾಚೆಗಿನ ಭಯೋತ್ಪಾದನೆಯ ನಿರಂತರ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಅಮಿತ್ ಷಾ ಅವರ ಹೇಳಿಕೆ ಬಳಿಕ ಸದನದಲ್ಲಿ ಗದ್ದಲ ಏರ್ಪಟ್ಟು ಸದನವನ್ನು ಮುಂದೂಡಲಾಯಿತು.