ನವದೆಹಲಿ: ಭಾರತ ದೇಶ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದೆಯಾದರೂ, ಉದ್ಯೋಗಿಗಳಿಗೆ ಉತ್ತಮ ಸಂಬಳ ನೀಡುವುದರಲ್ಲಿ ಎಂದೂ ಹಿಂದೆ ಉಳಿದಿಲ್ಲ! ಸಂಬಳಕ್ಕೆ ಸಂಬಂಧಿಸಿದಂತೆ LinkedIn ನಡೆಸಿರುವ ಅಧ್ಯಯನದ ಪ್ರಕಾರ, ಹಾರ್ಡ್ ವೇರ್ ಮತ್ತು ನೆಟ್ವರ್ಕಿಂಗ್, ಸಾಫ್ಟ್ವೇರ್ ಮತ್ತು ಗ್ರಾಹಕ ಕ್ಷೇತ್ರಗಳು ಭಾರತದಲ್ಲಿ ಅತ್ಯಧಿಕ ವೇತನವನ್ನು ನೀಡುವ ಉದ್ಯಮಗಳಾಗಿವೆ.


COMMERCIAL BREAK
SCROLL TO CONTINUE READING

ನಾವು ಐಟಿ ಕ್ಷೇತ್ರದ ಬಗ್ಗೆ ಮಾತನಾಡುವಾಗ ಉದ್ಯೋಗಿಗಳಿಗೆ ಅತಿ ಹೆಚ್ಚು ಸಂಬಳ ನೀಡುವ ನಗರ ಯಾವುದು ಎಂದರೆ ಸಾಮಾನ್ಯವಾಗಿ ಎಲ್ಲರೂ ದೆಹಲಿ ಅಥವಾ ಮುಂಬೈ ಎಂದು ಹೇಳುತ್ತಾರೆ. ಆದರೆ ಅದೆರಡೂ ಅಲ್ಲ. ದೇಶದಲ್ಲೇ ಅತಿ ಹೆಚ್ಚು ವೇತನ ನೀಡುವ ನಗರ ಎಂದರೆ ಸಿಲಿಕಾನ್ ವ್ಯಾಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಬೆಂಗಳೂರು ನಗರ! 


ಅಧ್ಯಯನದ ಪ್ರಕಾರ, ಮುಂಬೈ ವರ್ಷಕ್ಕೆ ಎಲ್ಲಾ ಭತ್ಯೆಗಳೂ ಸೇರಿ 9,03,929 ರೂ. ನೀಡಿದರೆ, ಬೆಂಗಳೂರಿನ ಉದ್ಯೋಗಿ ವರ್ಷಕ್ಕೆ ಸರಾಸರಿ ಒಟ್ಟು ವೇತನ 11,67,337 ರೂ. ನೀಡುತ್ತಿದೆ ಎಂದು ತಿಳಿದುಬಂದಿದೆ. 


ಏತನ್ಮಧ್ಯೆ, ಮುಂಬೈಗಿಂತ ದೆಹಲಿ-ಎನ್ಸಿಆರ್ ಕೇವಲ ಕೆಲವೇ ರೂಪಾಯಿಗಳಷ್ಟು ಕಡಿಮೆ ಇದ್ದು 8,99,486 ರೂ. ನೀಡುತ್ತಿದೆ ಎಂದು ಲಿಂಕ್ಡ್ಇನ್ ಇಂಡಿಯಾ ಉತ್ಪನ್ನಗಳ ಮುಖ್ಯಸ್ಥ ಅಜಯ್ ದತ್ತ ಹೇಳಿದ್ದಾರೆ. "ಭಾರತದ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ, ಯಾವ ಕ್ಷೇತ್ರದಲ್ಲಿ ಎಷ್ಟು ಸಂಬಳ ನೀಡಲಾಗುತ್ತಿದೆ ಎಂಬುದರಲ್ಲಿ ಪಾರದರ್ಶಕತೆ ತರಲು ಲಿಂಕ್ಡ್ಇನ್ ಈ ಅಧ್ಯಯನ ನಡೆಸಿದೆ. ಇದು ನಮ್ಮ ಸದಸ್ಯರಿಗೆ ಅನುಕೂಲವಾಗಲಿದ್ದು ವೇತನಕ್ಕೆ ಸಂಬಂಧಿಸಿದಂತೆ ಉತ್ತಮ ಡಾಟಾ ಒದಗಿಸಲಿದೆ ಎಂದು ತಿಳಿಸಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ.