ನಿಮ್ಮ ಬ್ಯಾಂಕ್ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ
ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆಬ್ರುವರಿ 1ರಂದೂ ಕೂಡ ಬ್ಯಾಂಕ್ ಕಾರ್ಮಿಕರು ಮುಷ್ಕರ ನಡೆಸಿದ್ದರು.
ನವದೆಹಲಿ: ಮಾರ್ಚ್ ತಿಂಗಳಿನಲ್ಲಿ ಮತ್ತೊಮ್ಮೆ ಬ್ಯಾಂಕ್ ನೌಕರರು ಮುಷ್ಕರ ಕೈಗೊಳ್ಳುವ ಸಾಧ್ಯತೆ ಇದೆ. ಈ ಕುರಿತು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದೆ. ಈ ವೇಳೆ ಬ್ಯಾಂಕ್ ಗಳು ದೀರ್ಘಾವಧಿಯವರೆಗೆ ಬಂದ್ ಇರಲಿದ್ದು, ಬ್ಯಾಂಕಿಂಗ್ ವ್ಯವಹಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ನೌಕರರ ಈ ಮುಷ್ಕರದ ಹಿನ್ನೆಲೆ ಸತತ ಐದು ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ.
5 ದಿನಗಳು ಬ್ಯಾಂಕ್ ಬಂದ್ ಇರಲಿವೆ
ವರದಿಗಳ ಪ್ರಕಾರ ಬ್ಯಾಂಕ್ ನೌಕರರು ಮಾರ್ಚ್ ತಿಂಗಳ ಎರಡನೆಯ ವಾರದಲ್ಲಿ ಮುಷ್ಕರ ಕೈಗೊಳ್ಳಲಿದ್ದಾರೆ. ಮಾರ್ಚ್ 11 ರಿಂದ ಮಾರ್ಚ್ 13ರವರೆಗೆ ಮೂರು ದಿನಗಳ ಕಾಲ ಬ್ಯಾಂಕ್ ಒಕ್ಕೂಟ ಮುಷ್ಕರ ಕೈಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಇದು ಸಾಧ್ಯವಾದರೆ ಮಾರ್ಚ್ 11ರಿಂದ ಮಾರ್ಚ್ 15ರವರೆಗೆ ಬ್ಯಾಂಕ್ ಗಳು ಕಾರ್ಯನಿರ್ವಹಿಸುವುದಿಲ್ಲ. ಕಾರಣ ಮಾರ್ಚ್ 14ರಂದು ತಿಂಗಳ ಎರಡನೇ ಶನಿವಾರದ ರಜೆ ಇರಲಿದ್ದರೆ, ಭಾನುವಾರ ವಾರದ ರಜೆ ಇರಲಿದೆ. ಹೀಗಾಗಿ ಒಟ್ಟು ಐದು ದಿನಗಳು ಬ್ಯಾಂಕ್ ವ್ಯವಹಾರದ ಮೇಲೆ ಪರಿಣಾಮ ಉಂಟಾಗಲಿದೆ.
ಬ್ಯಾಂಕ್ ನೌಕರರ ಒಕ್ಕೂಟದ ಬೇಡಿಕೆಗಳೇನು?
ಹಲವು ದಿನಗಳಿಂದ ಬ್ಯಾಂಕ್ ನೌಕರರು ತಮ್ಮ ಸಂಬಳದಲ್ಲಿ ಏರಿಕೆ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಇದಕ್ಕೂ ಮೊದಲು ನೌಕರರು ಜನವರಿ 31ಕ್ಕೆ ಹಾಗೂ ಫೆಬ್ರುವರಿ 1ಕ್ಕೆ ಒಂದು ದಿನದ ಮುಷ್ಕರ ಕೈಗೊಂಡಿದ್ದರು. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಒಕ್ಕೂಟ ಸರ್ಕಾರ ಇದುವರೆಗೂ ತಮ್ಮ ಬೇಡಿಕೆಗಳತ್ತ ಗಮನ ಹರಿಸಿಲ್ಲ ಎಂದಿವೆ. ಸರ್ಕಾರಿ ಕ್ಷೇತ್ರದ ಎಲ್ಲ ಬ್ಯಾಂಕ್ ನೌಕರರ ಸಂಬಳ 5 ವರ್ಷಕ್ಕೊಮ್ಮೆ ಏರಿಕೆ ಮಾಡಲಾಗುತ್ತದೆ. ಇದಕ್ಕೂ ಮೊದಲು 2012 ರಲ್ಲಿ ಸರ್ಕಾರಿ ಬ್ಯಾಂಕ್ ನೌಕರರ ಸಂಬಳವನ್ನು ಪರಿಷ್ಕರಿಸಲಾಗಿತ್ತು ಹಾಗೂ 2017 ರಲ್ಲಿ ನಡೆಯಬೇಕಿದ್ದ ವೇತನ ಪರಿಷ್ಕರಣೆ ಇದುವರೆಗೂ ನಡೆದಿಲ್ಲ ಎನ್ನಲಾಗಿದೆ. ವೇತನ ಪರಿಷ್ಕರಣೆಯ ಜೊತೆಗೆ ವಾರದಲ್ಲಿ ಎರಡು ದಿನಗಳ ರಜೆ ಕೂಡ ನೀಡಬೇಕು ಎಂದು ಬ್ಯಾಂಕ್ ನೌಕರರ ಒಕ್ಕೂಟ ಆಗ್ರಹಿಸಿದೆ. ಇವುಗಳ ಜೊತೆಗೆ ಬೇಸಿಕ್ ವೇತನದಲ್ಲಿ ವೃದ್ಧಿ, ವಿಶೇಷ ಅಲ್ಲೌನ್ಸ್ ಹಾಗೂ ಫ್ಯಾಮಿಲಿ ಪೆನ್ಷನ್ ಗಳಲ್ಲಿಯೂ ಕೂಡ ಬದಲಾವಣೆ ತರಲು ಒಕ್ಕೂಟ ಆಗ್ರಹಿಸಿದೆ.
ಏಪ್ರಿಲ್ 1 ರಿಂದ ಅನಿಶ್ಚಿತ ಕಾಲದವರೆಗೆ ಮುಷ್ಕರ
ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಎಚ್ಚರಿಕೆ ನೀಡಿರುವ ಬ್ಯಾಂಕ್ ಒಕ್ಕೂಟ, ಒಂದು ವೇಳೆ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಹೋದಲ್ಲಿ ಏಪ್ರಿಲ್ 1ರಿಂದ ಅನಿಶ್ಚಿತ ಕಾಲದವರೆಗೆ ಮುಷ್ಕರ ಕೈಗೊಳ್ಳಲಾಗುವುದು ಎಂದಿದೆ. ಇತ್ತೀಚೆಗಷ್ಟೇ ಒಕ್ಕೂಟ ಈ ಕುರಿತು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಜೊತೆಗೆ ಚರ್ಚೆ ನಡೆಸಿದೆ. ಆದರೆ, ಈ ಸಭೆಯಲ್ಲಿ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ.