ಚಂಡೀಗಢ: ಹ್ಯಾಂಡ್ ಬ್ಯಾಗ್ ನೀಡಲು ಗ್ರಾಹಕರಿಂದ 3 ರೂ. ಕೇಳಿದ ಬಾಟಾ ಇಂಡಿಯಾ ಸಂಸ್ಥೆಗೆ ಗ್ರಾಹಕ ಹಿತರಕ್ಷಣಾ ವೇದಿಕೆ 9,000 ಸಾವಿರ ರೂ. ದಂಡ ವಿಧಿಸಿದೆ. 


COMMERCIAL BREAK
SCROLL TO CONTINUE READING

ದಿನೇಶ್ ಪ್ರಸಾದ್ ಎಂಬುವರ ಫೆಬ್ರವರಿ 22ರಂದು ಚಂಡೀಗಢದ ಸೆಕ್ಟರ್ 22ರಲ್ಲಿರುವ ಬಾಟಾ ಶೋ ರೂಂಗೆ ತೆರಳಿ ಶೂ ಖರೀದಿಸಿದ್ದಾರೆ. ಬಳಿಕ ಬಿಲ್ಲಿಂಗ್ ಕೌಂಟರ್ ನಲ್ಲಿ ಹಣ ಪಾವತಿಸುವಾಗ 399 ರೂ. ಖರೀದಿಯ ಮೊತ್ತವಲ್ಲದೇ ಶೂ ಕೊಂಡೊಯ್ಯಲು ಬ್ಯಾಗ್ ಕೇಳಿದ್ದಕ್ಕಾಗಿ ಹೆಚ್ಚುವರಿ 3 ರೂ. ಪಾವತಿಸುವಂತೆ ಹೇಳಿದ್ದಾರೆ. ಅಲ್ಲಿಗೆ ಆ ಕ್ಷಣಕ್ಕೆ ಹಣ ನೀಡಿ ಬ್ಯಾಗ್ ಪಡೆದು ಹೊರಬಂದ ಪ್ರಸಾದ್, ಈ ವಿಚಾರವಾಗಿ ಅಸಮಾಧಾನಗೊಂಡು ಬಳಿಕ ಶೋ ರೂಮ್‌ ವಿರುದ್ಧ ಗ್ರಾಹಕ ವೇದಿಕೆಗೆ ದೂರು ನೀಡಿದ್ದರು.


ಈ ದೂರಿನ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ  ಗ್ರಾಹಕ ದಿನೇಶ್ ಪ್ರಸಾದ್ ಪರವಾಗಿ ತೀರ್ಪು ನೀಡಿ, ಪ್ರಸಾದ್ ಅವರಿಗೆ ಕೇವಲ 3 ರೂ. ಬ್ಯಾಗ್ ಹಣ ಹಿಂತಿರುಗಿಸುವುದಷ್ಟೇ ಅಲ್ಲದೆ, ಆದ ತೊಂದರೆಗಳು ಮತ್ತು ಕಾನೂನು ಶುಲ್ಕವನ್ನೂ ಭರಿಸುವಂತೆ ಬಾಟಾ ಸಂಸ್ಥೆಗೆ ನಿರ್ದೇಶಿಸಿದೆ. ಅದರಂತೆ 3000 ರೂಪಾಯಿಯನ್ನು ದೂರು ನೀಡಿದ ಗ್ರಾಹಕನಿಗೆ ಪರಿಹಾರದ ರೂಪದಲ್ಲಿ ನೀಡಬೇಕು ಮತ್ತು 5000 ರೂಪಾಯಿಯನ್ನು ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗದಲ್ಲಿ ಡೆಪಾಸಿಟ್ ಮಾಡಬೇಕು ಹಾಗೂ 1000 ರೂ.ಗಳ ಕಾನೂನು ವೆಚ್ಚವನ್ನು ಭರಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಗ್ರಾಹಕರಿಗೆ ಬ್ಯಾಗ್ ಗಳನ್ನು ಉಚಿತವಾಗಿ ನೀಡುವಂತೆ ಶೋ ರೂಮ್‌ ಗೆ ಸೂಚನೆ ನೀಡಿದೆ.