ಜಮುಯಿ: ಬಿಹಾರದ ಹಿತ ದೃಷ್ಟಿಯಿಂದ, ರಾಜ್ಯದ ವಿಕಾಸಕ್ಕಾಗಿ ನಾವು ಮತ್ತೊಮ್ಮೆ ಎನ್ ಡಿ ಎ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಜಮುಯಿಯ ಚಕಾಯಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಕಾಸಕ್ಕಾಗಿ ಶ್ರಮಿಸುತ್ತಿದೆ. ಇದರಿಂದ ದೇಶದ ಪ್ರತಿಷ್ಠೆ ಹೆಚ್ಚಿದೆ. ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ನಿತೀಶ್ ಕುಮಾರ್ ಹೇಳಿದರು.


ಭಾನುವಾರ ಚಕಾಯಿಯಲ್ಲಿನ ಹೈ ಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ  ಎನ್ ಡಿ ಎ ಮೈತ್ರಿ ಅಭ್ಯರ್ಥಿ ಚಿರಾಗ್ ಪಾಸ್ವಾನ್ ಪರವಾಗಿ ಮತಯಾಚನೆ ಮಾಡಿದ ನಿತೀಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿಯವರು ನೇತೃತ್ವದ ಕೇಂದ್ರದಲ್ಲಿ, ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ, ಅದು ದೇಶದ ಗೌರವ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸಿದೆ ಎಂದರು. 


ಈ ವೇಳೆ ಕೇಂದ್ರದ ಉಜ್ವಲಾ ಯೋಜನೆ, ಕಿಸಾನ್ ಸಹಾಯ ಯೋಜನೆಯಿಂದ ಜನಸಾಮಾನ್ಯರಿಗೆ ಆಗಿರುವ ಅನುಕೂಲಗಳನ್ನು ಉಲ್ಲೇಖಿಸಿದರು. ಜೊತೆಗೆ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆಯೂ ವಿವರಣೆ ನೀಡಿದರು.


ಬಿಹಾರದಲ್ಲಿ ನೂತನ ರಸ್ತೆಗಳ ನಿರ್ಮಾಣಕ್ಕಾಗಿ ಕೇಂದ್ರದಿಂದ 50,000 ಕೋಟಿ ರೂ. ನೆರವು ಸಿಕ್ಕಿದೆ ಎಂದು ಎನ್ಡಿಎ ಅಭ್ಯರ್ಥಿ ಚಿರಾಗ್ ಪಾಸ್ವಾನ್ ಅವರ ಕೆಲಸವನ್ನು ಮುಖ್ಯಮಂತ್ರಿ ಪ್ರಶಂಸಿಸಿದರು.


ಅದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಗ್ಗೆ ಮಾತನಾಡಿದ ನಿತೀಶ್ ಕುಮಾರ್, ಅವರ ಮ್ಯಾನಿಫೆಸ್ಟೋವನ್ನು ನೋಡಿದರೆ ನಗು ಬರುತ್ತದೆ. ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗುವುದಿಲ್ಲ. ಅದರಲ್ಲಿ ಬಡವರಿಗೆ ಲಾಭ ನೀಡುವ ಬಗ್ಗೆ ಹೇಳಲಾಗಿದೆ. ಆದರೆ ಅದರ ಬಗ್ಗೆ ಯಾವುದೇ ಅಂದಾಜು ಅಥವಾ ಸಮೀಕ್ಷೆ ಇಲ್ಲವೇ ದಾಖಲೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ, ಬಡವರಿಗೆ ಏನು ತಾನೇ ಲಾಭವಾದೀತು ಎಂದು ವ್ಯಂಗ್ಯವಾಡಿದರು.


ಎನ್ಡಿಎ ತನ್ನ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸದ ಆಧಾರದ ಮೇಲೆ ಮತಗಳನ್ನು ಕೇಳುತ್ತಿದೆ. ವಿರೋಧ ಪಕ್ಷಗಳಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ವಿರೋಧ ಪಕ್ಷಗಳು ಸಮಾಜದಲ್ಲಿ ದ್ವೇಷದ ವಾತಾವರಣವನ್ನು ಸೃಷ್ಟಿಸುತ್ತಿವೆ ಎಂದು ವಿರೋಧ ಪಕ್ಷಗಳ ವಿರುದ್ಧ ನಿತೀಶ್ ವಾಗ್ದಾಳಿ ನಡೆಸಿದರು.