ಇಂದು, ನಾಳೆ ಭಾರತ್ ಬಂದ್: ಏನಿದೆ, ಏನಿಲ್ಲ!
ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ಗಳು.
ಬೆಂಗಳೂರು: ಜನವರಿ 8, 9ರಂದು ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಕಾಲ ಭಾರತ ಬಂದ್‌ಗೆ ಕರೆ ನೀಡಿವೆ.
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜ.8 ಮತ್ತು 9ರಂದು ಕರೆ ನೀಡಿವೆ. ಅದರಿಂದಾಗಿ ಕರ್ನಾಟಕ ಸಹಿತ ದೇಶಾದ್ಯಂತ ಜನಜೀವನಕ್ಕೆ ತೊಂದರೆಯಾಗಲಿದೆ.
ಭಾರತ್ ಬಂದ್‌ಗೆ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ, ಈ ಬಂದ್‌ಗೆ ಟ್ರೋಲ್ ಬಂಕ್ ಮಾಲೀಕರ ಅಸೋಸಿಯೇಶನ್, ಖಾಸಗಿ ಬಸ್ ಮಾಲಕರ ಸಂಘ,ಟ್ಯಾಕ್ಸಿ ಅಸೋಸಿಯೇಶನ್, ರಾಜ್ಯ ಹೋಟೆಲ್ ಮಾಲಕರ ಸಂಘ, ಏರ್ ಪೋರ್ಟ್ ಟ್ಯಾಕ್ಸಿ ಮಾಲಕರ ಸಂಘ ಬೆಂಬಲ ನೀಡಿಲ್ಲ.
ಏತನ್ಮಧ್ಯೆ, ಭಾರತ ಬಂದ್ ನಮ್ಮ ಮೆಟ್ರೋ ಸಂಚಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ. ನಮ್ಮ ಮೆಟ್ರೋ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿರುವ ಬಿಎಂಆರ್‌ಸಿಎಲ್ ಅಧಿಕಾರಿಗಳು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡರೆ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ಮಾರ್ಗದಲ್ಲಿ ಪ್ರತಿ ಮೂರು ನಿಮಿಷಕ್ಕೊಂದು ಮೆಟ್ರೋ ಸಂಚರಿಸಲಿದೆ ಎಂದಿದ್ದಾರೆ.
ಶಾಲಾ-ಕಾಲೇಜುಗಳಿಗೆ ರಜೆ:
ಬಂದ್ ಹಿನ್ನೆಲೆಯಲ್ಲಿ ಹಲವು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ವಿಶ್ವವಿದ್ಯಾನಿಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ತುರ್ತು ಸೇವೆ:
ಬಂದ್ ನಡೆಯುವ ಎರಡೂ ದಿನ ನಿತ್ಯದ ಅಗತ್ಯ ವಸ್ತುಗಳು, ತುರ್ತು ಸೇವೆಗಳಿಗೆ ಅವಕಾಶ ನೀಡಲಾಗಿದೆ. ಆಸ್ಪತ್ರೆಗಳು, ಮೆಡಿಕಲ್ ಶಾಪ್, ಆ್ಯಂಬುಲೆನ್ಸ್ ಸೇವೆಗಳು ಇರುತ್ತವೆ. ಬೆಳಗ್ಗೆ ಹಾಲು, ತರಕಾರಿ, ಪೇಪರ್ ಲಭ್ಯ ಇರುತ್ತವೆ.
ಬಂದ್‌ಗೆ ನೈತಿಕ ಬೆಂಬಲ ಸೂಚಿಸಿದ ಕನ್ನಡ ಚಿತ್ರರಂಗ:
ಭಾರತ್ ಬಂದ್ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ಫಿಲ್ಮ್ ಛೇಂಬರ್ ಅಧ್ಯಕ್ಷ ಚಿನ್ನೇಗೌಡರು, ನಾಳೆ ಮತ್ತು ನಾಡಿದ್ದು ಸಿನಿಮಾ ಪ್ರದರ್ಶನ ಹಾಗೂ ಚಲನಚಿತ್ರ ಚಟುವಟಿಕೆಗಳು ಎಂದಿನಂತೆ ನಡೆಯುತ್ತವೆ. ನಮಗೆ ಇಲ್ಲಿಯವರೆಗೂ ಯಾರು ಬೆಂಬಲ ನೀಡಿ ಎಂದು ಮನವಿ ಮಾಡಿಲ್ಲ. ಕಾರ್ಮಿಕರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ನೈತಿಕ ಬೆಂಬಲ ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಹೀಗಾಗಿ ಕಪ್ಪು ಪಟ್ಟಿ ಹಿಡಿದುಕೊಳ್ಳುವ ಮೂಲಕ ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಯಾವ ಸೇವೆ ಸಿಗಲಿದೆ, ಯಾವ ಸೇವೆ ಸಿಗಲ್ಲ ಎಂಬ ಪಕ್ಷಿನೋಟ ಇಲ್ಲಿದೆ...
ಏನಿದೆ:
* ಖಾಸಗಿ ಬಸ್
* ಪೆಟ್ರೋಲ್ ಬಂಕ್
* ಮೆಟ್ರೋ, ಚಿತ್ರಮಂದಿರ, ಆಸ್ಪತ್ರೆ, ಮೆಡಿಕಲ್
* ಆಸ್ಪತ್ರೆಗಳು, ಮೆಡಿಕಲ್ ಶಾಪ್
* ಆ್ಯಂಬುಲೆನ್ಸ್ ಸೇವೆ
* ಹಾಲು, ತರಕಾರಿ, ಪೇಪರ್
* ಮೆಟ್ರೋ ರೈಲು ಸೇವೆ, ಹೋಟೆಲ್, ವಿಮಾನ, ರೈಲು
ಏನಿಲ್ಲ:
* ಕೆಎಸ್‌ಆರ್‌ಟಿಸಿ, ಬಿಎಂಟಿಸಿ
* ಆ್ಯಪ್ ಆಧಾರಿತ ಟ್ಯಾಕ್ಸಿ, ಆಟೋ ಸೇವೆ ಬಂದ್
* ಬ್ಯಾಂಕ್, ಉಬರ್, ಒಲಾ ಕ್ಯಾಬ್, ಹಲವು ಬ್ಯಾಂಕ್