ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾದ ದೇಶದ ಜನತೆ; ಖಾತೆಗೆ ಬಂದ ಹಣವೆಷ್ಟು?
ಅರೆ ಮಿಲಿಟರಿ ಪಡೆಗೆ ಸೇರಿದ ಅಧಿಕಾರಿಯೊಬ್ಬರ ಪ್ರಕಾರ ಜನರ ಸಹಾಯ ಮುಂದುವರೆದಿದೆ.
ನವದೆಹಲಿ: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬದ ಹಿಂದೆ ಇಡೀ ಭಾರತವೇ ಇದೇ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಈ ಮಾತು ಅಕ್ಷರಶಃ ಸತ್ಯ. ಹೌದು, ಹುತಾತ್ಮ ಯೋಧರ ಕುಟುಂಬಕ್ಕೆ ಇಡೀ ದೇಶದ ಜನತೆ ನೆರವಾಗಿದೆ. ಸಶಸ್ತ್ರ ಪಡೆಗಳ ಹುತಾತ್ಮರ ಕುಟುಂಬದ ಸಹಾಯಕ್ಕಾಗಿ ರಚಿಸಲಾದ "ಭಾರತ್ ಕೆ ವೀರ್" ಬ್ಯಾಂಕ್ ಖಾತೆಯಲ್ಲಿ ಜನರ ನೆರವಿನಿಂದ ಈವರೆಗೂ 80 ಕೋಟಿ ರೂ. ಜಮಾ ಆಗಿದೆ. ಈ ಖಾತೆಯಲ್ಲಿ ಹಿಂದಿನ ಎರಡು ವರ್ಷಗಳಲ್ಲಿ, ಸಾಮಾನ್ಯ ಜನರಿಂದ 20 ಕೋಟಿ ರೂ. ಸಂಗ್ರಹವಾಗಿತ್ತು.
"ಸಾಮಾನ್ಯ ಜನರು ನಮ್ಮ ಹುತಾತ್ಮರ ಸೈನಿಕರ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳು ಒಬ್ಬಂಟಿಯಲ್ಲ, ಇಡೀ ದೇಶವೇ ಅವರೊಂದಿಗಿದೆ" 'ಭಾರತ್ ಕೆ ವೀರ್ ಖಾತೆ' ಗೆ ಸೇರಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅರೆ ಮಿಲಿಟರಿ ಪಡೆಗೆ ಸೇರಿದ ಅಧಿಕಾರಿಯೊಬ್ಬರ ಪ್ರಕಾರ ಜನರ ಸಹಾಯ ಮುಂದುವರೆದಿದೆ. 'ಭಾರತ್ ಕೆ ವೀರ್ ಖಾತೆ'ಗೆ ಸಂಬಂಧಿಸಿ ಯಾವುದೇ ಹುತಾತ್ಮರ ಕುಟುಂಬದ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ.
ಏನಿದು 'ಭಾರತ್ ಕೆ ವೀರ್' ಖಾತೆ?
ಸಹಾಯಧನ ನೀಡಲು ಇಚ್ಚೆಯಿದ್ದು, ಯಾವುದೇ ಯೋಧರ ಕುಟುಂಬಸ್ಥರ ವೈಯಕ್ತಿಕ ಖಾತೆಗೆ ಹಣಸಂದಾಯ ಮಾಡಲು ಇಚ್ಚಿಸುವ ಸಾರ್ವಜನಿಕರಿಗೆ ಅನುವಾಗುವಂತೆ 'ಭಾರತ್ ಕೆ ವೀರ್' ಎಂಬ ಸಾರ್ವತ್ರಿಕ ಖಾತೆ ತೆರೆಯಲಾಗಿದ್ದು, ಈ ಖಾತೆಗೆ ಹಣ ಸಂದಾಯ ಮಾಡಬಹುದಾಗಿದೆ.
ಈ ಅಭಿಯಾನವು 2017ರ ಎಪ್ರಿಲ್ ತಿಂಗಳಿನಲ್ಲಿ ಆರಂಭವಾಗಿದ್ದು, ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ಹುತಾತ್ಮರಾದ ಸೈನಿಕರ ಮತ್ತು ಸಶಸ್ತ್ರ ಪಡೆಗಳ ಯೋಧರ ಕುಟುಂಬಗಳಿಗೆ ಸಹಾಯ ಮಾಡಲು ಇಚ್ಚಿಸುವ ಸಾರ್ವಜನಿಕರು ನೇರವಾಗಿ ಹುತಾತ್ಮರ ಕುಟುಂಬದ ಖಾತೆಗೆ ಹಣ ವರ್ಗಾವಣೆ ಮಾಡಲು ಹೊಸದಾಗಿ ಆರಂಭಿಸಿರುವ ವೆಬ್ ಪೋರ್ಟಲ್ ಇದಾಗಿದೆ. ಪ್ರತಿ ಹುತಾತ್ಮ ವೀರ ಯೋಧನ ಕುಟುಂಬಗಳಿಗೆ ಗರಿಷ್ಠ 15 ಲಕ್ಷ ರೂಪಾಯಿಗಳವರೆಗೆ ಸಹಾಯ ಧನ ನೀಡಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.