ಭಾರತ ರತ್ನ ಸಚಿನ್ ತೆಂಡುಲ್ಕರ್ ಅವರ ಭದ್ರತೆಯಲ್ಲಿ ಇಳಿಕೆ
ಅಣ್ಣಾ ಹಜಾರೆ ಭದ್ರತೆಯಲ್ಲಿ ಹೆಚ್ಚಳ, ಪವಾರ್ ಗೆ ನೀಡಿರುವ ಭದ್ರತೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ಬಿಜೆಪಿ ನಾಯಕರ ಭದ್ರತೆಯಲ್ಲಿಯೂ ಕಡಿತ.
ಮುಂಬೈ:ಕ್ರಿಕೆಟ್ ಜಗತ್ತಿನ ದಂತಕಥೆ ಎಂದೇ ಹೇಳಲಾಗುವ ಭಾರತರತ್ನ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಕಡಿತಗೊಳಿಸಲಾಗಿದೆ. ಭಾರತರತ್ನ ಸನ್ಮಾನ ಪಡೆದ ಸಚಿನ್ ತೆಂಡೂಲ್ಕರ್ ಅವರಿಗೆ 'ಎಕ್ಸ್' ದರ್ಜೆಯ ಭದ್ರತೆ ಒದಗಿಸಲಾಗಿತ್ತು. ಇನ್ನೊಂದೆಡೆ 29 ವರ್ಷದ ಶಿವಸೇನಾ ಶಾಸಕ ಆದಿತ್ಯ ಠಾಕ್ರೆ ಅವರಿಗೆ 'ವೈ' ದರ್ಜೆಯ ಭದ್ರತೆ ಒದಗಿಸಲಾಗಿತ್ತು.
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು ಇತ್ತೀಚೆಗಷ್ಟೇ ಮಹಾ ಸರ್ಕಾರದ ಸಮಿತಿಯೊಂದು ಈ ಕುರಿತು ಸಮೀಕ್ಷೆ ನಡೆಸಿತ್ತು . ಬಳಿಕ ವಿಭಿನ್ನ ಮುಖಂಡರ ಮೇಲಿರುವ ಭೀತಿಯನ್ನು ಪರಿಗಣಿಸಿ ಅವರ ಭದ್ರತೆಯಲ್ಲಿ ಹೆಚ್ಚಳ ಮಾಡಲಾಗಿದೆ ಎಂದಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಸಚಿನ್ ತೆಂಡೂಲ್ಕರ್ ಹಾಗೂ ಆದಿತ್ಯ ಠಾಕ್ರೆ ಅವರನ್ನು ಹೊರತುಪಡಿಸಿ 90 ವರ್ಷದ ಓರ್ವ ಹಿರಿಯ ಸಾಮಾಜಿಕ ಮುಖಂಡರ ಸುರಕ್ಷತೆಯನ್ನೂ ಸಹ ಪರಿಶೀಲಿಸಲಾಗಿದೆ ಎನ್ನಲಾಗಿದೆ.
ಸಚಿನ್ ತೆಂಡೂಲ್ಕರ್ ಅವರಿಗೆ 'ಎಕ್ಸ್' ದರ್ಜೆಯ ಭದ್ರತೆ ಒದಗಿಸಲಾಗಿತ್ತು
ತೆಂಡೂಲ್ಕರ್ ಅವರಿಗೆ ಇದುವರೆಗೆ 'ಎಕ್ಸ್' ದರ್ಜೆಯ ಭದ್ರತೆ ಒದಗಿಸಲಾಗಿತ್ತು. ಇದರಡಿ ಓರ್ವ ಪೋಲೀಸ್ ಅಧಿಕಾರಿ ಹಗಲು-ರಾತ್ರಿ ಸಚಿನ್ ಅವರ ಭದ್ರತೆ ನೋಡಿಕೊಳ್ಳುತ್ತಿದ್ದರು. ಆದರೆ, ಇದೀಗ ಅವರಿಗೆ ನೀಡಲಾಗಿದ್ದ ಈ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿದ್ದು. ಇನ್ಮುಂದೆ ಸಚಿನ್ ಯಾವಾಗ ಮನೆಯಿಂದ ಹೊರಬೀಳುತ್ತಾರೆ ಆಗ ಮಾತ್ರ ಅವರಿಗೆ ಪೋಲೀಸ್ ಭದ್ರತೆ ಒದಗಿಸಲಾಗುವುದು ಎನ್ನಲಾಗಿದೆ.
ಆದಿತ್ಯ ಠಾಕ್ರೆ ಭದ್ರತೆಯಲ್ಲಿ ಹೆಚ್ಚಳ
ಇನ್ನೊಂದೆಡೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸುಪುತ್ರ ಆದಿತ್ಯ ಠಾಕ್ರೆ ಅವರಿಗೆ 'ಝೆಡ್' ದರ್ಜೆಯ ಸುರಕ್ಷೆ ನೀಡಲಾಗಿದೆ. ಇದರರ್ಥ ಅವರ ಭದ್ರತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಲೀಸರನ್ನು ನಿಯೋಜಿಸಲಾಗುವುದು. ವರ್ಲಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಆದಿತ್ಯ ಠಾಕ್ರೆ ಅವರಿಗೆ ಇದುವರೆಗೆ 'ವೈ' ದರ್ಜೆಯ ಭದ್ರತೆ ಒದಗಿಸಲಾಗಿತ್ತು.
NCP ಅಧ್ಯಕ್ಷ ಶರದ್ ಪವಾರ್ ಅವರ 'ಝೆಡ್ ಪ್ಲಸ್' ಹಾಗೂ ಅವರ ಸೋದರಳಿಯ ಅಜಿತ್ ಪವಾರ್ ಅವರ 'ಝೆಡ್' ದರ್ಜೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.
ಅಣ್ಣಾ ಹಜಾರೆ ಅವರಿಗೆ 'ಝೆಡ್' ಶ್ರೇಣಿಯ ಭದ್ರತೆ
ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಈ ಮೊದಲು ನೀಡಲಾಗಿದ್ದ 'ವೈ' ದರ್ಜೆಯ ಭದ್ರತೆಯನ್ನು ಪರಿಸ್ಕರಿಸಲಾಗಿದ್ದು, ಅವರ ಭದ್ರತೆಯನ್ನು 'ಝೆಡ್' ಶ್ರೇಣಿಗೆ ಏರಿಸಲಾಗಿದೆ. ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ರಾಮ್ ನಾಯಿಕ್ ಅವರ ಭದ್ರತೆಯನ್ನು 'ಝೆಡ್ ಪ್ಲಸ್' ಇಂದ ಇಳಿಕೆ ಮಾಡಿ 'ಎಕ್ಸ್' ಶ್ರೇಣಿಗೆ ತಂದಿಡಲಾಗಿದೆ.
ಬಿಜೆಪಿ ನಾಯಕರ ಭದ್ರತೆಯಲ್ಲಿ ಇಳಿಕೆ
ಬಿಜೆಪಿಯ ಮಾಜಿ ಮಂತ್ರಿಗಳಾಗಿರುವ ಏಕನಾಥ್ ಖಡ್ಸೆ ಹಾಗೂ ರಾಮ್ ಶಿಂದೆ ಅವರ ಭದ್ರತೆಯಲ್ಲಿಯೂ ಕೂಡ ಕಡಿತ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಭಾರತೀಯ ಜನತಾ ಪಕ್ಷದ ಹಿಂದಿನ ಸರ್ಕಾರದಲ್ಲಿ ಹಲವು ಮಂತ್ರಿಗಳಿಗೆ ನೀಡಲಾಗಿದ್ದ ಭದ್ರತೆಯನ್ನೂ ಸಹ ಪರಿಷ್ಕರಿಸಿ ಇಳಿಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಖ್ಯಾತ ವಕೀಲ ಉಜ್ವಲ್ ನಿಕಮ್ ಭದ್ರತೆಯಲ್ಲಿಯೂ ಪರಿಷ್ಕರಣೆ
ಕ್ಯಾತ ವಕೀಲ ಉಜ್ವಲ್ ನಿಕಮ್ ಅವರಿಗೆ ಈ ಮೊದಲು 'ಝೆಡ್ ಪ್ಲಸ್' ಶ್ರೇಣಿಯ ಭದ್ರತೆ ಒದಗಿಸಲಾಗಿತ್ತು. ಅದನ್ನು ಕೆಳಗಿಳಿಸಿ 'ವೈ' ದರ್ಜೆಯ ಸುರಕ್ಷೆ ನೀಡಲಾಗುತ್ತಿದ್ದು, ಇನ್ಮುಂದೆ ಅವರ ಸುರಕ್ಷತೆಗೆ ಭದ್ರತಾದಳ ಇರಲಿದೆ.